ಮಡಿಕೇರಿ, ಡಿ. 1 : ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದಾಗಿರುವ ತಡಿಯಂಡಮೋಳ್ ಬೆಟ್ಟ ವೀಕ್ಷಣೆಗೆ ಪ್ರವಾಸಿಗರಿಗೆ ವಿಧಿಸಿರುವ ನಿರ್ಬಂಧವನ್ನು ತಕ್ಷಣ ತೆರವುಗೊಳಿಸಬೇಕು ಎಂದು ಮಡಿಕೇರಿ ತಾಲೂಕು ಬುಡಕಟ್ಟು ಕೃಷಿಕರ ಸಂಘ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕುಡಿಯರ ಎ.ಮುತ್ತಪ್ಪ ಅವರು, ತಡಿಯಂಡಮೋಳ್ ಬೆಟ್ಟವನ್ನು ವೀಕ್ಷಿಸಲು ಪ್ರವಾಸಿಗರಿಗೆ ನಿರ್ಬಂಧ ಹೇರಿರುವದರಿಂದ ಪ್ರವಾಸೋದ್ಯ ಮವನ್ನೇ ನಂಬಿ ಬದುಕು ಸಾಗಿಸುತ್ತಿರುವ ಬಡ ಕುಟುಂಬಗಳಿಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದರು.ಪ್ರಸಕ್ತ ಸಾಲಿನಲ್ಲಿ ಸುರಿದ ಅತಿವೃಷ್ಟಿಯಿಂದಾಗಿ ನಾಲ್ಕುನಾಡು ವಿಭಾಗದಲ್ಲಿ ಕಾಫಿ, ಕರಿಮೆಣಸು ಸೇರಿದಂತೆ ಎಲ್ಲಾ ವಿಧದ ಬೆಳೆಗಳು ನಾಶವಾಗಿದ್ದು, ಪರಿಣಾಮವಾಗಿ ಆ ಭಾಗದ ಕಾಫಿ ತೋಟಗಳಲ್ಲಿ ದುಡಿಯುತ್ತಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೂರಾರು ಕೂಲಿ ಕಾರ್ಮಿಕ ಕುಟುಂಬಗಳಿಗೆ ಕೆಲಸವಿಲ್ಲದಂತಾಗಿದೆ. ತೋಟ ಮಾಲೀಕರು ಕೂಡ ಈ ಕುಟುಂಬಗಳಿಗೆ ಕೆಲಸ ನೀಡಲಾಗದ ಪರಿಸ್ಥಿತಿಯಲ್ಲಿದ್ದಾರೆ. ಅನೇಕ ಕೂಲಿ ಕಾರ್ಮಿಕ ಕುಟುಂಬಗಳು ನಾಲ್ಕುನಾಡು ವಿಭಾಗದ ನೂರಾರು ಹೋಂಸ್ಟೇಗಳು ಮತ್ತು ರೆಸಾರ್ಟ್‍ಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಯವಕಪಾಡಿ ಗ್ರಾಮದ ಅನೇಕ ಬುಡಕಟ್ಟು ಯುವಕರು ಪ್ರವಾಸಿಗರಿಗೆ ಮಾರ್ಗದರ್ಶನ ಮಾಡುವ ತರಬೇತಿ ಪಡೆದಿದ್ದು, ಆ ಮೂಲಕ ಟ್ರೆಕ್ಕಿಂಗ್‍ಗೆ ತೆರಳುವ ಪ್ರವಾಸಿಗರಿಗೆ ನೆರವಾಗುವದ ರೊಂದಿಗೆ ತಮ್ಮ ಕುಟುಂಬ ನಿರ್ವಹಣೆಗೂ ಸಹಾಯವಾಗುತ್ತಿತ್ತು. ಆದರೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿರುವದರಿಂದ ಅವರ ಆದಾಯಕ್ಕೂ ಹೊಡೆತ ಬಿದ್ದಿದೆ. ಪ್ರಕೃತಿ ವಿಕೋಪದಿಂದಾಗಿ ಅರಣ್ಯದಲ್ಲಿ ಕಿರು ಉತ್ಪನ್ನಗಳು ಕೂಡ ಸಂಪೂರ್ಣ ನಾಶವಾಗಿದ್ದು, ಇದರಿಂದಾಗಿ ಈ ಭಾಗದ ಬುಡಕಟ್ಟು ಜನಾಂಗದವರ ಜೀವನ ಶೋಚನೀಯವಾಗಿದೆ ಎಂದು ಮುತ್ತಪ್ಪ ಅಳಲು ತೋಡಿಕೊಂಡರು.

ಪ್ರಕೃತಿ ವಿಕೋಪಕ್ಕೆ ತುತ್ತಾದ ಮಾಂದಲಪಟ್ಟಿ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ

(ಮೊದಲ ಪುಟದಿಂದ) ಕಲ್ಪಿಸಲಾಗಿದ್ದರೂ, ಯಾವದೇ ಅನಾಹುತ ಸಂಭವಿಸದ ತಡಿಯಂಡಮೋಳ್ ಬೆಟ್ಟದ ವೀಕ್ಷಣೆಗೆ ಅವಕಾಶ ನೀಡದಿರುವದು ವಿಷಾದನೀಯ. ಹೋಂಸ್ಟೇ ಮಾಲೀಕರ ಬಗ್ಗೆ ಅರಣ್ಯ ಇಲಾಖೆ, ಜಿಲ್ಲಾಡಳಿತಕ್ಕೆ ಭಿನ್ನಾಭಿಪ್ರಾಯ ಗಳಿದ್ದರೂ, ಬುಡಕಟ್ಟು ಜನರ ಅದರಲ್ಲೂ ಕೂಲಿ ಕಾರ್ಮಿಕರ ಜೀವನೋಪಾಯಕ್ಕೆ ಪೂರಕವಾಗಿರುವ ಪ್ರವಾಸೋದ್ಯಮಕ್ಕೆ ಜಿಲ್ಲಾಡಳಿತ ಪ್ರೋತ್ಸಾಹ ನೀಡಬೇಕೆಂದು ಮುತ್ತಪ್ಪ ಆಗ್ರಹಿಸಿದರು.

ತಮ್ಮ ಬೇಡಿಕೆಗೆ ಸ್ಪಂದನ ದೊರಕದಿದ್ದಲ್ಲಿ ಜನವರಿಯಿಂದ ತಡಿಯಂಡಮೋಳ್ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಅರಣ್ಯ ಇಲಾಖೆ ಅಳವಡಿಸಿರುವ ಗೇಟ್‍ನ್ನು ಗ್ರಾಮದ ಅರಣ್ಯ ಹಕ್ಕು ಸಮಿತಿ ತನ್ನ ವಶಕ್ಕೆ ಪಡೆದುಕೊಳ್ಳುವ ಮೂಲಕ ಪ್ರವಾಸಿಗರ ನಿಯಂತ್ರಣವನ್ನು ಸ್ವತಃ ಅರಣ್ಯ ಹಕ್ಕು ಸಮಿತಿಯೇ ನಿರ್ವಹಿಸಲಿದೆ ಎಂದು ಎಚ್ಚರಿಕೆ ನೀಡಿದರು

ತಡಿಯಂಡಮೋಳ್ ವ್ಯಾಪ್ತಿಯ 4650 ಎಕರೆ ಪ್ರದೇಶವನ್ನು ಈಗಾಗಲೇ ಗ್ರಾಮ ಅರಣ್ಯ ಹಕ್ಕು ಸಮಿತಿಗೆ ವಹಿಸಲಾಗಿದ್ದು, ಅಲ್ಲಿ ಅರಣ್ಯ ಇಲಾಖೆಗೆ ಯಾವದೇ ಅಧಿಕಾರ ಇಲ್ಲ. ಆದರೆ ಕಂದಾಯ ಇಲಾಖೆಗೆ ಸೇರಿದ ಪೈಸಾರಿ ಜಾಗದಲ್ಲಿ ಗೇಟ್ ಅಳವಡಿಸುವ ಮೂಲಕ ಪ್ರವಾಸಿಗರಿಂದ ಹಣ ಸಂಗ್ರಹಿಸುತ್ತಿತ್ತು. ಪ್ರಸಕ್ತ ಸುಮಾರು 8-10 ಲಕ್ಷದಷ್ಟು ಶುಲ್ಕವನ್ನು ಅರಣ್ಯ ಇಲಾಖೆ ಪ್ರವಾಸಿಗರಿಂದ ಸಂಗ್ರಹಿಸಿದ್ದರೂ, ತಡಿಯಂಡಮೋಳ್ ಬೆಟ್ಟಕ್ಕೆ ತೆರಳುವ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಇಲಾಖೆ ಮುಂದಾಗಿಲ್ಲ ಎಂದು ಆರೋಪಿಸಿದರು. ಇದೀಗ ರಸ್ತೆ ಸರಿ ಇಲ್ಲ ಎಂಬ ನೆಪವೊಡ್ಡಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿರುವದಾಗಿ ಹೇಳಲಾಗುತ್ತಿದೆ ಎಂದು ಟೀಕಿಸಿದರು.

ಅರಣ್ಯ ಹಕ್ಕು ಕಾಯ್ದೆಯನ್ವಯ ತಡಿಯಂಡಮೋಳ್ ಬೆಟ್ಟದ ಮೇಲಿನ ಎಲ್ಲಾ ಅಧಿಕಾರವನ್ನು ಅರಣ್ಯ ಇಲಾಖೆ ಕಳೆದುಕೊಂಡಿದ್ದರೂ, ಇದೀಗ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವದು ಖಂಡನೀಯ ಎಂದು ಮುತ್ತಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಗ್ರಾಮ ಅರಣ್ಯ ಹಕ್ಕು ಸಮಿತಿ ಸಭೆ ನಡೆಸಿ, ಪ್ರವಾಸಿಗರಿಂದ ಶುಲ್ಕ ವಸೂಲಿ ಸೇರಿದಂತೆ ಪ್ರವಾಸಿಗರ ನಿಯಂತ್ರಣವನ್ನು ಸಂಪೂರ್ಣವಾಗಿ ಸಮಿತಿಯೇ ಪಡೆದುಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಒಂದು ವೇಳೆ ಇದಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸಿದಲ್ಲಿ ಕಾನೂನು ಹೋರಾಟಕ್ಕೂ ಮುಂದಾಗುವದಾಗಿ ಅವರು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯರಾದ ಕೆ.ಎ. ಬೋಪಯ್ಯ, ಕ್ರೀಡಾ ಸಮಿತಿ ಪ್ರಮುಖರಾದ ಕೆ.ಪಿ. ಶರತ್ ಹಾಗೂ ಬಿ. ದೇವಯ್ಯ ಉಪಸ್ಥಿತರಿದ್ದರು.