ಮಡಿಕೇರಿ, ಡಿ. 1: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಗಮನ ಸೆಳೆಯಲು ಎಲ್ಲರು ಸಂಘಟಿತರಾಗಿ ಒಕ್ಕೊರಲಿನ ಹೋರಾಟ ಹಮ್ಮಿಕೊಳ್ಳಲು ಇಂದು ತೀರ್ಮಾನಿಸಲಾಯಿತು. ಅಲ್ಲದೆ ಈ ಸಂಬಂಧ ತಾ. 3 ರಂದು ಮತ್ತೊಂದು ಸಭೆ ನಡೆಸಿ, ತಾ. 8 ರಂದು ಮುಖ್ಯ ಮಂತ್ರಿಗಳ ಜಿಲ್ಲಾ ಭೇಟಿಯ ವೇಳೆ ಮಾತುಕತೆ ನಡೆಸಿ, ಸರಕಾರದ ನಿಲುವು ನೋಡಿಕೊಂಡು ಮುಂದಿನ ಹೆಜ್ಜೆ ಇಡುವಂತೆಯೂ ನಿರ್ಧರಿಸಲಾಯಿತು.ನಗರದ ಸುದರ್ಶನ ಅತಿಥಿ ಗೃಹದಲ್ಲಿ ಇಂದು ಶಾಸಕತ್ರಯರಾದ ಎಂ.ಪಿ. ಅಪ್ಪಚ್ಚು ರಂಜನ್, ವೀಣಾ ಅಚ್ಚಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ ಉಪಸ್ಥಿತಿಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಕೊಡಗು ಪ್ರಾಕೃತಿಕ ವಿಕೋಪ ಮತ್ತು ನೆರೆ ಸಂತ್ರಸ್ತರ ಸಮಿತಿಯ ಆಶ್ರಯದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರೊಂದಿಗೆ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿ ಸಲಹೆಗಳನ್ನು ನೀಡಿದರು.

ಸಮಿತಿ ಅಧ್ಯಕ್ಷ ಎಂ.ಪಿ. ಮನು ಮೇದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಭಿಪ್ರಾಯ ಮಂಡಿಸಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು, ಇದುವರೆಗೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದಿಂದ ಜಿಲ್ಲೆಗೆ ಕಲ್ಪಿಸಿರುವ ನೆರವು, ರಸ್ತೆಗಳ ಅಭಿವೃದ್ಧಿ, ಆಸ್ತಿ-ಪಾಸ್ತಿ ಕಳೆದುಕೊಂಡವರಿಗೆ ಪರಿಹಾರ ಸೇರಿದಂತೆ ಶೇ. 5 ರಷ್ಟು ಸಮಸ್ಯೆ ಬಗೆಹರಿಸಿದ್ದು, ಶೇ. 95ರಷ್ಟು ಬವಣೆ ಎದುರಿಸಬೇಕಾಗಿದೆ ಎಂದು ನೆನಪಿಸಿದರು.

ಈ ದಿಸೆಯಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋರಾಟ ನಡೆಸುವದು ಅನಿವಾರ್ಯವೆಂದು ನುಡಿದ ಅವರು, ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಗಳ ವರದಿ ಆದರಿಸಿ ಕೊಡಗಿನ ಕಾಫಿ, ತೋಟಗಾರಿಕೆ, ಕೃಷಿ ಫಸಲುಗಳ ನಷ್ಟದ ಅಂದಾಜು ಸಹಿತ ಮನೆ, ಮಠ ಕಳೆದುಕೊಂಡವರ ಆಸರೆಗಾಗಿ ಸರಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗಳ ವಿವರ ನೀಡಿದ ಶಾಸಕರು, ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸುವ ಇಂಗಿತ ವ್ಯಕ್ತಪಡಿಸಿದರು. ಜನ ಬೀದಿಗಿಳಿದು ಹೋರಾಟ ನಡೆಸದಿದ್ದರೆ ಅಗತ್ಯ ಪರಿಹಾರ ಹೊಂದಿಕೊಳ್ಳುವದು ಕಷ್ಟಸಾಧ್ಯವೆಂದು ಅಭಿಪ್ರಾಯಪಟ್ಟರು.

ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಹಾಗೂ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಕೂಡ ಧ್ವನಿಗೂಡಿಸಿ ಹೋರಾಟದ ಹೊರತು ಕೊಡಗಿನ ಜನತೆಯ ಕೂಗು ಸರಕಾರಕ್ಕೆ ಮುಟ್ಟುವದಿಲ್ಲವೆಂದು ಪ್ರತಿಪಾದಿಸುತ್ತಾ, ಬೃಹತ್ ರೀತಿಯ ಪ್ರತಿಭಟನೆ ಅತ್ಯಗತ್ಯ ವೆಂದು ಸಲಹೆ ನೀಡಿದರು. ಪಕ್ಷಾತೀತ ಹಾಗೂ ಬೇರೆ ಬೇರೆ ವೇದಿಕೆಗಳು ಏಕ ವ್ಯವಸ್ಥೆಯಲ್ಲಿ ಹೋರಾಡ ಬೇಕೆಂದು ಅಭಿಪ್ರಾಯಪಟ್ಟರು.

ಮತ್ತೋರ್ವ ಮೇಲ್ಮನೆ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಬೇರೆ ಬೇರೆ ವ್ಯವಸ್ಥೆಯಲ್ಲಿ ಪರಿಹಾರ ಕಾರ್ಯಗಳ ನೆರವು ಕ್ರೋಢೀಕರಿಸಿ ಸಂತ್ರಸ್ತರಿಗೆ ತಲಪಿಸುವ ಕೆಲಸ ಶ್ಲಾಘನೀಯವೆಂದರಲ್ಲದೆ, ಎಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿ ಸುವಂತೆ ಪ್ರಯತ್ನ ಅವಶ್ಯಕವೆಂದು ಸಲಹೆಯಿತ್ತರು. ಕೊಡಗಿಗೆ ಹರಿದು ಬಂದ ನೆರವಿಗಾಗಿ

(ಮೊದಲ ಪುಟದಿಂದ) ರಾಜ್ಯದ ದಾನಿಗಳನ್ನು ಸ್ಮರಿಸಬೇಕಿದೆ ಎಂದು ಬೊಟ್ಟು ಮಾಡಿದರು.

ಅಸಮಾಧಾನ: ಕೇವಲ ಮನೆಗಳನ್ನು ಕಳೆದುಕೊಂಡವರಿಗೆ ಜಿಲ್ಲಾಡಳಿತದ ಶಿಫಾರಸ್ಸು ಮೇರೆಗೆ ಸರಕಾರ ಆದ್ಯತೆ ನೀಡುವಂತಾಗಿದ್ದು, ಎಕರೆಗಟ್ಟಲೆ ಕಾಫಿ ತೋಟ, ಭತ್ತದ ಗದ್ದೆ, ಕೆರೆ, ಬಾವಿ, ಇತರ ಆಸ್ತಿ ಕಳೆದುಕೊಂಡವರ ಬಗ್ಗೆ ಯಾವದೇ ನಷ್ಟ ಪರಿಹಾರ ಕುರಿತು ಕಾಳಜಿ ತೋರದಿರುವದು ಬೆಳೆಗಾರರ ಸಹಿತ ಅನೇಕರಿಗೆ ನೋವುಂಟು ಮಾಡಿದೆ ಎಂದು ಸಂತ್ರಸ್ತರ ಸಮಿತಿ ಅಧ್ಯಕ್ಷ ಎಂ.ಪಿ. ಮನುಮೇದಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಆಗಸ್ಟ್‍ನಲ್ಲೇ ಹಾನಿ ಸಂಭವಿಸಿದ ಬೆನ್ನಲ್ಲೇ ಸಮಿತಿ ರಚಿಸಿಕೊಂಡು ಯಾರೊಬ್ಬರನ್ನೂ ನೋಯಿಸದೆ ಮೌನ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಯಾವ ಸ್ಪಂದನ ಲಭಿಸಿಲ್ಲವೆಂದು ವಿಷಾದಿಸಿದರು.

ಪ್ರಾಕೃತಿಕ ದುರಂತ: ಕರ್ನಾಟಕ ಬೆಳೆಗಾರರ ಒಕ್ಕೂಟದ ವಕ್ತಾರ ಕೆ.ಕೆ. ವಿಶ್ವನಾಥ್ ಭೂಗರ್ಭ ಇಲಾಖೆಯ ವರದಿ ಉಲ್ಲೇಖಿಸುತ್ತಾ, ಪ್ರಾರಂಭಿಕ ಭೂಕುಸಿತದ ವರದಿಯಲ್ಲಿ ವಾಸ್ತವವಿದ್ದು, ಮಳೆಯ ತೀವ್ರತೆಯ ಪರಿಣಾಮ ಭೂಮಿಯ ಮಣ್ಣು ನೀರಿನ ಸಾಂದ್ರತೆ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೆ ಪ್ರಾಕೃತಿಕ ದುರಂತ ಸಂಭವಿಸಿದ್ದಾಗಿ ಬೊಟ್ಟು ಮಾಡಿದರು. ಹೀಗಾಗಿ ತೋಟಗಳನ್ನು ಕಳೆದುಕೊಂಡಿರುವ ಬೆಳೆಗಾರರ ಸಹಿತ ಜಿಲ್ಲೆಯ ಪ್ರತಿಯೊಬ್ಬ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲೆ ಒಗ್ಗೂಡಿ ಒತ್ತಡ ಹೇರುವ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು. ಸಾಲಮನ್ನಾ ಕುರಿತು ಧ್ವನಿಯೆತ್ತಯವಂತೆ ಸಲಹೆ ನೀಡಿದರು.

ಕಾಲಾವಕಾಶ ನೀಡಲಿ: ಬೆಳೆಗಾರರ ಒಕ್ಕೂಟ ಉಪಾಧ್ಯಕ್ಷ ನಂದಾ ಬೆಳ್ಯಪ್ಪ ಮಾತನಾಡಿ, ಈಗಿನ ಸ್ಥಿತಿಯಲ್ಲಿ ಯಾವೊಬ್ಬ ಕೃಷಿಕ ತನ್ನ ಪಾಲಿನ ನಷ್ಟದಿಂದ ಮೇಲೇಳಲು ಸಾಧ್ಯವಿಲ್ಲವಾಗಿದ್ದು, ಬ್ಯಾಂಕುಗಳ ಸಾಲವನ್ನು ಮನ್ನಾಗೊಳಿಸಿ, ಕಾಫಿ ಮಂಡಳಿ-ಸರಕಾರಗಳಿಂದ ಅಗತ್ಯ ಪರಿಹಾರದೊಂದಿಗೆ ಪರ್ಯಾಯ ಜಾಗ ನೀಡಿ ಕೃಷಿಗೆ ಉತ್ತೇಜನ ಕಲ್ಪಿಸಬೇಕೆಂದು ಒತ್ತಡ ಹೇರುವ ಅವಶ್ಯಕತೆ ಇದೆ ಎಂದರು.

ಹೋರಾಟಕ್ಕೆ ಬೆಂಬಲ: ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಗೌಡ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ, ಒಕ್ಕಲಿಗ ಸಮಾಜ ಉಪಾಧ್ಯಕ್ಷ ವಿ.ಪಿ. ಸುರೇಶ್, ಗೌಡ ಸಮಾಜ ಅಧ್ಯಕ್ಷ ಜಯಾನಂದ, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಅವರುಗಳು ಮಾತನಾಡಿ, ಏಕವೇದಿಕೆಯಡಿ ಹೋರಾಟ ರೂಪಿಸಲು ತಮ್ಮೆಲ್ಲರ ಬೆಂಬಲ ಘೋಷಿಸಿದರು. ಬೇರೆ ಬೇರೆ ಹೆಸರಿನಿಂದ ಸಂತ್ರಸ್ತರ ನೆರವಿಗೆ ಮುಂದಾಗಿರುವ ಎಲ್ಲರನ್ನು ಒಂದು ವ್ಯವಸ್ಥೆಗೆ ತರುವಂತೆಯೂ ಸಲಹೆ ನೀಡಿದರು.

ತಾ. 3 ರಂದು ಸಭೆ: ಆ ದಿಸೆಯಲ್ಲಿ ತಾ. 3 ರಂದು ಎಲ್ಲ ಜನಪ್ರತಿನಿಧಿಗಳ ಸಮ್ಮುಖ ಮತ್ತೊಂದು ಸಭೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಇಂದಿನ ಸಭೆ ತೀರ್ಮಾನಿಸಿತು. ಆ ಸಭೆಯಲ್ಲಿ ಎಲ್ಲರು ಸಮ್ಮತಿಸಿದರೆ ತಾ. 7 ರಂದು ಮೌನ ಪ್ರತಿಭಟನೆ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಇಂಗಿತ ವ್ಯಕ್ತವಾಯಿತು.

ಮುಖ್ಯಮಂತ್ರಿ ಜತೆ ಚರ್ಚೆ: ತಾ. 8 ರಂದು ಜಿಲ್ಲೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಮ್ಮುಖ ಹೋರಾಟ ಸಮಿತಿ ಪ್ರಮುಖರು, ಜನಪ್ರತಿನಿಧಿಗಳು ಜಿಲ್ಲೆಯ ಜನತೆಯ ಸಂಕಷ್ಟ ಕುರಿತು ಪ್ರತ್ಯೇಕ ಮಾತುಕತೆ ಮೂಲಕ ವಾಸ್ತವದ ಮನವರಿಕೆ ಮಾಡಿಕೊಡ ಬೇಕೆಂದು ಪತ್ರಕರ್ತ ಹೆಚ್.ಟಿ. ಅನಿಲ್ ಸಲಹೆ ನೀಡಿದರು. ಆ ದಿಸೆಯಲ್ಲಿ ಪ್ರಯತ್ನಿಸಲಾಗುವದು ಎಂದು ಶಾಸಕತ್ರಯರು ಭರವಸೆ ನೀಡಿದರು.

ಸಭೆಯಲ್ಲಿ ಕೊಡಗು ಪ್ರಾಕೃತಿಕ ವಿಕೋಪ ಮತ್ತು ನೆರೆ ಸಂತ್ರಸ್ತರ ಸಮಿತಿ ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ವಿಷಯ ಪ್ರಸ್ತಾಪಿಸಿ ವರದಿ ಸಲ್ಲಿಸಿದರು. ಮಕ್ಕಂದೂರು ರಮೇಶ್ ವಂದಿಸಿದರು.