ಕುಶಾಲನಗರ, ಡಿ. 1: ಕುಶಾಲನಗರ ಖಾಸಗಿ ಬಸ್ ನಿಲ್ದಾಣಕ್ಕೆ ಕಲ್ಪಿಸಿರುವ ಸಂಪರ್ಕ ರಸ್ತೆಯನ್ನು ಜೆಸಿಬಿ ಬಳಸಿ ಕಂದಕ ನಿರ್ಮಿಸಿರುವ ಘಟನೆ ನಡೆದಿದೆ. ಕಳೆದ ಹಲವು ವರ್ಷಗಳಿಂದ ಸ್ಥಳೀಯ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಇತ್ತೀಚೆಗೆ ಬಹುತೇಕ ಪೂರ್ಣಗೊಳ್ಳುತ್ತಿದ್ದು ಲೋಕಾರ್ಪಣೆಗೆ ಸಿದ್ದವಾಗಿರುವ ಸಂದರ್ಭ ನಡೆದ ಈ ಘಟನೆಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಕುಶಾಲನಗರ ಖಾಸಗಿ ಬಸ್ ನಿಲ್ದಾಣಕ್ಕೆ ಅಂದಾಜು 1 ಕೋಟಿ ರೂ. ವ್ಯಯಿಸಲಾಗಿದ್ದು ಖಾಸಗಿ ಬಸ್‍ಗಳ ನಿಲುಗಡೆಗೆ ಶಾಶ್ವತ ನಿಲ್ದಾಣ ಸಧ್ಯದಲ್ಲಿಯೇ ದೊರೆಯಲಿದೆ. ಈ ನಡುವೆ ಸಂಪರ್ಕ ರಸ್ತೆಯ ಗೊಂದಲದ ಬಗ್ಗೆ ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್‍ಕುಮಾರ್ ಬಳಿ ಪ್ರತಿಕ್ರಿಯೆ ಬಯಸಿದ ಸಂದರ್ಭ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸಧ್ಯದಲ್ಲಿಯೇ ಖಾಸಗಿ ಬಸ್‍ಗಳ ಸೇವೆಗೆ ಈ ನಿಲ್ದಾಣ ಹಸ್ತಾಂತರಗೊಳ್ಳಲಿದೆ. ಸ್ಥಳೀಯ ನಾಗರಿಕರಾದ ವಿ.ಪಿ.ನಾಗೇಶ್ ಮತ್ತಿತರರು ಈ ಜಾಗ ತಮಗೆ ಸೇರಿದೆಂದು ರಸ್ತೆಯನ್ನು ಜೆಸಿಬಿ ಬಳಸಿ ಕಂದಕ ನಿರ್ಮಿಸಿದ್ದಾರೆ. ತಕ್ಷಣ ಕೆಲಸ ನಿಲ್ಲಿಸಲಾಗಿದ್ದು ಈ ಬಗ್ಗೆ ದಾಖಲೆ ಪರಿಶೀಲಿಸುವದಾಗಿ ನಾಗೇಶ್ ಅವರಿಗೆ ಭರವಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.