ಸಿದ್ದಾಪುರ, ಡಿ. 1: ಸಿದ್ದಾಪುರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ‘ನುಡಿ ಹಬ್ಬ’ ಕಾರ್ಯಕ್ರಮ ಅದ್ಧೂರಿಯಿಂದ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬಿ.ಜಿ.ಎಸ್. ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 10 ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ.ಸಾ.ಪ ಜಿಲ್ಲಾಧ್ಯಕ್ಷ ಲೊಕೇಶ್ ಸಾಗರ್, ಇತ್ತೀಚೆಗೆ ಬಂದ ಆಂಗ್ಲ ಭಾಷೆಯ ಪ್ರಭಾವದಿಂದಾಗಿ ಹಲವು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಕುತ್ತು ಬಂದಿದೆ. ವಿದ್ಯಾರ್ಥಿಗಳು ಕೂಡ ಕನ್ನಡ ಭಾಷೆಯನ್ನು ಕೀಳಾಗಿ ಕಾಣದೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೂಡ ಕನ್ನಡ ಭಾಷೆಯಲ್ಲೂ ನಡೆಸಲು ಕ.ಸಾ.ಪ ಆಂದೋಲನ ಆರಂಭಿಸಲಿದೆ ಎಂದರು.

ಸಿದ್ದಾಪುರ ಗ್ರಾ.ಪಂ ಅಧ್ಯಕ್ಷ ಮಣಿ, ಮಾಲ್ದಾರೆ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಶಿವರಾಂ ಮಾತನಾಡಿದರು. ವೇದಿಕೆಯಲ್ಲಿ ನೆಲ್ಯಹುದಿಕೇರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಕೃಷ್ಣವೇಣಿ, ಚೆಟ್ಟಳ್ಳಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ತಿಲಕ ಇದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕ.ಸಾ.ಪ. ಅಮ್ಮತ್ತಿ ಹೋಬಳಿಯ ಅಧ್ಯಕ್ಷ ಎಂ.ಎಸ್ ವೆಂಕಟೇಶ್ ಕನ್ನಡ ಭಾಷೆ ಸಾಹಿತ್ಯ ಹಾಗೂ ಮೌಲ್ಯಗಳನ್ನು ಹೊಂದಿರುವಂತ ಭಾಷೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಪೋಷಕರು ಆಂಗ್ಲ ಭಾಷೆಗೆ ಮಾರು ಹೋಗಿರುವ ಪರಿಣಾಮ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಿದ್ದಾಪುರ ಗ್ರಾಮ ಪಂಚಾಯಿತಿಯ ಅಭಿವೃಧ್ದಿ ಅಧಿಕಾರಿ ವಿಶ್ವನಾಥ್ ಮಾತನಾಡಿ, ಕನ್ನಡ ಭಾಷೆಯ ಆಚರಣೆಯು ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ, ನಿರಂತರವಾಗಿ ಕನ್ನಡ ಭಾಷಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.

ಕ.ಸಾ.ಪ ಜಿಲ್ಲಾ ಆಹ್ವಾನಿತ ಸದಸ್ಯರಾದ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ಕನ್ನಡ ಭಾಷೆಯು 2 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೇಷ್ಟ ಭಾಷೆಯಾಗಿದೆ. ಗಡಿ ಭಾಗದಲ್ಲಿ ಪರಭಾಷಿಗರು ಹೆಚ್ಚಾಗಿದ್ದು, ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಬೇಕು. ಆಂಗ್ಲ ಭಾಷೆಯೊಂದಿಗೆ ಕನ್ನಡ ಭಾಷೆಯನ್ನೂ ಕೂಡ ಬೆಳೆಸಬೇಕೆಂದರು.

ವೇದಿಕೆಯಲ್ಲಿ ಸಿದ್ದಾಪುರ ಠಾಣಾಧಿಕಾರಿ ದಯಾನಂದ ಸೇರಿದಂತೆ ಶಿಕ್ಷಕ ವೃಂದ, ಉಪಾನ್ಯಾಸಕರು, ಶಾಲಾ ಆಡಳಿತ ಮಂಡಳಿಯ ಪ್ರಮುಖರು ಇನ್ನಿತರರು ಇದ್ದರು.

‘ನುಡಿ ಹಬ’್ಬ ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಬಿ.ಜಿ.ಎಸ್. ಶಾಲೆಯ ಲಾವಣ್ಯ ಪ್ರಥಮ, ಸಿದ್ದಾಪುರದ ಇಕ್ರಾ ಪಬ್ಲಿಕ್ ಶಾಲೆಯ ಅಮೃತ್ ವಿಪಿನ್ ದ್ವಿತೀಯ, ಪಾಲಿಬೆಟ್ಟ ಲೂಡ್ಸ್ ಹಿಲ್ಸ್ ಶಾಲೆಯ ಶ್ರೇಷ್ಟ ಪಿ.ಜೆ. ತೃತೀಯ ಬಹುಮಾನ ಪಡೆದರು. ರಸಪ್ರಶ್ನೆ ವಿಭಾಗದಲ್ಲಿ ಸಿದ್ದಾಪುರ ಪ್ರೌಢಶಾಲೆ ಪ್ರಥಮ, ಪಾಲಿಬೆಟ್ಟ ಲೂಡ್ಸ್ ಹಿಲ್ಸ್ ಶಾಲೆ ದ್ವಿತೀಯ, ಅಮ್ಮತ್ತಿ ನೇತಾಜಿ ಶಾಲೆ ತೃತೀಯ ಬಹುಮಾನ ಪಡೆದರು. ಕನ್ನಡ ಭಾವಗೀತೆ ಸ್ಪರ್ಧೆಯಲ್ಲಿ ಚೆಟ್ಟಳ್ಳಿ ಪ್ರೌಢಶಾಲೆಯ ಜ್ಯೂನಿಯ ಪ್ರಥಮ, ಸಿದ್ದಾಪುರ ಪ್ರೌಢಶಾಲೆಯ ದರ್ಶನ್ ದ್ವಿತೀಯ, ಬಿ.ಜಿ.ಎಸ್. ಶಾಲೆಯ ರಾಜೇಶ್ವರಿ ತೃತೀಯ ಬಹುಮಾನ ಪಡೆದರು.

‘ನುಡಿ ಹಬ್ಬ’ದ ಪ್ರಯುಕ್ತ ವಿದ್ಯಾರ್ಥಿಗಳಿಗೂ, ಸಾರ್ವಜನಿಕರಿಗೂ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.