ಸೋಮವಾರಪೇಟೆ, ಡಿ. 1: ಸೈನಿಕರ ನಾಡೆಂದು ಕರೆಸಿಕೊಳ್ಳುತ್ತಿರುವ ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಸೈನ್ಯಕ್ಕೆ ಆಯ್ಕೆಯಾಗುವವರ ಸಂಖ್ಯೆ ಕಡಿಮೆಯಾಗುತ್ತಿದೆ.

ಇದಕ್ಕೆ ನಿರಂತರ ಅಭ್ಯಾಸ ಹಾಗೂ ಸತತ ಪರಿಶ್ರಮದ ಕೊರತೆ ಕಾರಣವಾಗಿದೆ ಎಂದು ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಬಡ್ತಿ ಹೊಂದಿರುವ ಲೋಹಿತ್ ವೀರಪ್ಪ ಅಭಿಪ್ರಾಯಿಸಿದರು.

ಭಾರತೀಯ ಭೂಸೇನೆಯಲ್ಲಿ ಮೇಜರ್ ರ್ಯಾಂಕ್ ಹುದ್ದೆಗೆ ಬಡ್ತಿ ಹೊಂದಿದ ಹಿನ್ನೆಲೆ, ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಬಿ.ಟಿ.ಸಿ.ಜಿ. ಪಿ.ಯು. ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಮತ್ತು ಕಾಲೇಜಿನ ಲಿಯೋ ಕ್ಲಬ್‍ನ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಸೇನೆ ಸೇರಲು ಎಲ್ಲಾ ರಾಜ್ಯದ ಅಭ್ಯರ್ಥಿಗಳಿಗೂ ಹೆಚ್ಚಿನ ಆಸಕ್ತಿ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೊಡಗಿನ ಅಭ್ಯರ್ಥಿಗಳು ಆಯ್ಕೆಯಲ್ಲಿ ವಿಫಲರಾಗುತ್ತಿದ್ದಾರೆ. ಸೇನಾ ಆಯ್ಕೆಯ ಪ್ರತಿ ವಿಭಾಗಕ್ಕೆ ಪ್ರಾಮುಖ್ಯತೆ ನೀಡಿದರೆ ಮಾತ್ರ ಯುವ ಜನಾಂಗ ಸೇನೆ ಸೇರ್ಪಡೆಯಾಗಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ದೇಶದ ಸೇನೆಯ ಬಗ್ಗೆ ವಿದ್ಯಾರ್ಥಿ ಜೀವನದಲ್ಲಿಯೇ ಆಸಕ್ತಿ ಬೆಳೆಸಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ದೈಹಿಕ ಹಾಗೂ ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕು. ಒಮ್ಮೆ ಸೇನೆಯಲ್ಲಿ ಸೇವೆ ಸಲ್ಲಿಸಿದರೆ ನಂತರ ಯಾವದೇ ಕ್ಷೇತ್ರ, ಸ್ಥಳದಲ್ಲಾದರೂ ಕೆಲಸ ನಿರ್ವಹಿಸುವ ಆತ್ಮಸ್ಥೈರ್ಯವನ್ನು ಸಂಪಾದಿಸಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಯೋಗೇಶ್ ವಹಿಸಿದ್ದರು. ಲಯನ್ಸ್ ವಲಯ ಅಧ್ಯಕ್ಷ ಮಹೇಶ್, ಸದಸ್ಯರಾದ ನಿರ್ವಾಣಿ ಶೆಟ್ಟಿ, ಗಣೇಶ್, ಕಾಲೇಜಿನ ಪ್ರಾಂಶುಪಾಲ ಶರಣ್, ಲಿಯೋ ಕ್ಲಬ್ ಅಧ್ಯಕ್ಷ ಗಗನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.