ಗೋಣಿಕೊಪ್ಪ ವರದಿ, ಡಿ. 1: ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದಲ್ಲಿ ಕಾವೇರಿ ಕಲರವ ಎಂಬ ಕಾರ್ಯಕ್ರಮವನ್ನು ತಾ. 3 ರಂದು ಆಯೋಜಿಸಲಾಗಿದೆ ಎಂದು ಗೋಣಿಕೊಪ್ಪ ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ತಿಳಿಸಿದರು.

ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಲಾಗಿದೆ. ತಂಡದಲ್ಲಿ ಶಿಕ್ಷಕರಿಗೂ ಒಂದು ಸ್ಥಾನ ಅವಕಾಶ ನೀಡಲಾಗುತ್ತಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಿಗ್ಗೆ 9.45 ಗಂಟೆಯಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಬಾಲಕರಿಗೆ ಕ್ರಿಕೆಟ್, ಬಾಲಕಿಯರಿಗೆ ಥ್ರೋಬಾಲ್, ಉಳಿದಂತೆ ಕ್ವಿಜ್, ಟ್ರೆಷರ್ ಹಂಟ್ ಹಾಗೂ ಜಾನಪದ ನೃತ್ಯ ನಡೆಯಲಿದೆ.

ಕ್ರಿಕೆಟ್ ತಂಡದಲ್ಲಿ ವಿದ್ಯಾರ್ಥಿ ಗಳೊಂದಿಗೆ ಒಬ್ಬ ಶಿಕ್ಷಕ, ಥ್ರೋಬಾಲ್‍ಗೆ ಕೂಡ ಒಂದು ಶಿಕ್ಷಕಿಯನ್ನು ಸೇರಿಸಿಕೊಳ್ಳ ಬಹುದಾಗಿದೆ. ಕ್ವಿಜ್‍ನಲ್ಲಿ ಇಬ್ಬರು ವಿದ್ಯಾರ್ಥಿಗಳ ತಂಡ, ಟ್ರೆಷರ್ ಹಂಟ್‍ನಲ್ಲಿ ನಾಲ್ವರ ಒಂದು ತಂಡ, ನೃತ್ಯದಲ್ಲಿ 4 ನಿಮಿಷಗಳ 6 ಜನರ ಒಂದು ತಂಡ ಪಾಲ್ಗೊಳ್ಳ ಬಹುದಾಗಿದೆ. ಜಿಲ್ಲೆಯ ಸುಮಾರು 45 ಶಾಲೆಗಳಿಂದ 700 ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಸಿ.ಎಂ. ಶಾಂತಿ, ಕಾವೇರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ. ಎ.ಸಿ. ಗಣಪತಿ, ನಿರ್ದೇಶಕ ಕೆ.ಪಿ. ಬೋಪಣ್ಣ, ಇಂಜಿನಿಯರ್ ಸಣ್ಣುವಂಡ ನವೀನ್, ಕಾಫಿ ಬೆಳೆಗಾರ ಕುಟ್ಟಂಡ ಮದನ್, ದಾನಿಗಳಾದ ಸಿ.ಎಂ. ಶರತ್, ಕೆ.ಪಿ. ಧರ್ಮಜ, ಬಾನಂಗಡ ಅರುಣ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಕಾರ್ಯಕ್ರಮ ಸಂಚಾಲಕರುಗಳಾದ ಎಸ್.ಆರ್. ತಿರುಮಲ್ಲಯ್ಯ, ಎಂ.ಆರ್. ಪದ್ಮ ಹಾಗೂ ಡಾ. ರೇಖಾ ಚಿಣ್ಣಪ್ಪ ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗೆ 7760511766 ಸಂಪರ್ಕಿಸ ಬಹುದಾಗಿದೆ.