ವೀರಾಜಪೇಟೆ, ಡಿ. 1: ವೀರಾಜಪೇಟೆಯ ಮಿನಿ ವಿಧಾನಸೌಧದ ಮುಂದೆ ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ ನಡೆಯುತ್ತಿರುವ ಧರಣಿ ಮುಷ್ಕರದ ಸ್ಥಳಕ್ಕೆ ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಭೇಟಿ ನೀಡಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು ಪ್ರತಿಭಟನಾಕಾರರು ಅವರ ಮಾತಿಗೆ ಮನ್ನಣೆ ನೀಡಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಆಗಮಿಸುವವರೆಗೆ ಪ್ರತಿಭಟನೆ ಕೈಬಿಡುವದಿಲ್ಲ ಎಂದು ಘೋಷಣೆ ಕೂಗಿದರು.

ದಲಿತ ಮುಖಂಡ ಪರಶುರಾಮ್ ಮಾತನಾಡಿ, ಕಳೆದ 5 ವರ್ಷಗಳಿಂದ ಎಲ್ಲ್ಲ ಜಿಲ್ಲಾಧಿಕಾರಿಗಳೂ ನಿವೇಶನ ನೀಡುತ್ತೇವೆ ಎಂದು ಹೇಳುತ್ತಲೇ ಬಂದಿದ್ದಾರೆ. ಈವರೆಗೆ ಯಾವೊಬ್ಬ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ನಿವೇಶನ ನೀಡಿಲ್ಲ. ಪ್ರತಿ ಬಾರಿಯೂ ಅಲ್ಲಿ, ಇಲ್ಲಿ ನಿವೇಶನಗಳನ್ನು ಗುರುತು ಮಾಡಲಾಗಿದೆ; ಶೀಘ್ರದಲ್ಲಿಯೆ ವಿತರಣೆ ಮಾಡುತ್ತೇವೆ ಎಂದು ಹೇಳಿ ನಮ್ಮ ಪ್ರತಿಭಟನೆಯನ್ನು ಮೊಟಕುಗೊಳಿಸುತ್ತಿದ್ದರು.

ಈ ಬಾರಿ ಆ ರೀತಿ ಆಗಲು ಬಿಡುವದಿಲ್ಲ. ಕೂಗಳತೆಯ ದೂರದಲ್ಲಿಯೇ ಶಾಸಕರ ಕಚೇರಿ ಇದೆ. ಅವರು ಕೂಡ ಬಂದು ನಮ್ಮ ಕೂಗನ್ನು ಕೇಳಿಲ್ಲ. ನಿನ್ನೆ ದಿನ ಸಂಸದ ಪ್ರತಾಪ್ ಸಿಂಹ, ಸಚಿವ ಯು.ಟಿ ಖಾದರ್ ಮಡಿಕೇರಿಗೆ ಭೇಟಿ ನೀಡಿದ್ದಾರೆ. ನಮ್ಮಲ್ಲಿಗೆ ಬಂದಿಲ್ಲ. ದಲಿತರೆಂದರೆ ಎಲ್ಲರಿಗೂ ತಾತ್ಸಾರವಾಗಿದೆ. ಪ್ರತಿಭಟನೆಯಲ್ಲಿ ಬಹುತೇಕರು ತೋಟ ಮಾಲೀಕರ ಲೈನ್‍ಮನೆಯಲ್ಲಿ ವಾಸಿಸುವವರೆ. ಲೈನ್ ಮನೆಗಳನ್ನು ತೊರೆದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಪುನಃ ಅಲ್ಲಿಗೆ ಹೋದರೆ ನಮ್ಮನ್ನು ತೋಟ ಮಾಲೀಕರು ಬಿಡುವದಿಲ್ಲ; ನಮಗೆ ಗಂಜಿ ಕೇಂದ್ರವನ್ನು ನಿರ್ಮಿಸಿ ಕೊಡಿ ಎಂದು ಹೇಳಿದರು.

ಪ್ರತಿಭಟನಾಕಾರರ ಹೇಳಿಕೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಈಗಾಗಲೆ ಐಟಿಡಿಪಿ ಅಧಿಕಾರಿಗಳು ನಿವೇಶನಕ್ಕಾಗಿ ಸರ್ಕಾರಿ ಜಾಗಗಳನ್ನು ಗುರುತು ಮಾಡಿದ್ದಾರೆ. ಜಿಲ್ಲೆಯ ಮೂರು ತಾಲೂಕುಗಳಲ್ಲಿ ಇಂತಹ ಸಮಸ್ಯೆ ಇದೆ. ಸರ್ವೆ ಕಾರ್ಯ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದಷ್ಟು ಬೇಗ ನಿವೇಶನ ನೀಡಲಾಗುವದು. ತೋಟದ ಮಾಲೀಕರು ಕಿರುಕುಳ ನೀಡದಂತೆ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ. ಮುಷ್ಕರವನ್ನು ಕೈಬಿಡಿ ಎಂದು ಹೇಳಿದಾಗ ಜಿಲ್ಲಾ ಉಸ್ತುವಾರಿ ಸಚಿವರು ಬರುವವರೆಗೆ ಮುಷ್ಕರ ಕ್ಯೆಬಿಡುವ ಪ್ರಶ್ನೆ ಇಲ್ಲ ಎಂದು ಹೇಳಿ ಮುಷ್ಕರರವನ್ನು ಮುಂದುವರೆಸಿದರು.

ಈ ಸಂದರ್ಭದಲ್ಲಿ ಐಟಿಡಿಪಿ ಅಧಿಕಾರಿ ಶಿವಕುಮಾರ್, ತಹಶೀಲ್ದಾರ್ ಬಸವರಾಜು ಸೇರಿದಂತೆ ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು.