ವೀರಾಜಪೇಟೆ, ಡಿ. 1: ವೀರಾಜಪೇಟೆಯ ಮಿನಿ ವಿಧಾನಸೌಧದ ಮುಂದೆ ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ ನಡೆಯುತ್ತಿರುವ ಧರಣಿ ಮುಷ್ಕರ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿತು.

ಧರಣಿ ಮುಷ್ಕರ ನಡೆಯುವ ಸ್ಥಳಕ್ಕೆ ಕೊಡಗು ಉಪ ವಿಭಾಗಾಧಿಕಾರಿ ಜವರೇಗೌಡ ಅವರು ಭೇಟಿ ನೀಡಿ ಸಂಘಟನೆಯ ನಾಯಕರುಗಳೊಂದಿಗೆ ಮಾತುಕತೆ ನಡೆಸಿದರೂ ಸಂಧಾನ ವಿಫಲವಾದ ಹಿನ್ನಲೆಯಲ್ಲಿ ಧರಣಿ ಮುಷ್ಕರ ಮುಂದುವರೆಸಲು ಸಂಘಟನೆ ನಿರ್ಧರಿಸಿರುವದಾಗಿ ಜಿಲ್ಲಾ ಸಂಚಾಲಕ ಎಚ್.ಆರ್. ಪರಶುರಾಮ್ ತಿಳಿಸಿದರು.

ಉಪ ವಿಭಾಗಾಧಿಕಾರಿ ಜವರೇಗೌಡ ಅವರ ಪ್ರಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ನಿವೇಶನ ರಹಿತರಿಗೆ ನಿವೇಶನ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನಿವೇಶನ ರಹಿತ ಫಲಾನುಭವಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಭೇಟಿ ಮಾಡಿ, ಸೂಕ್ತ ದಾಖಲೆ ನೀಡಿ ನಿವೇಶನದ ಹಕ್ಕು ಪತ್ರಗಳನ್ನು ಪಡೆದುಕೊಳ್ಳಬಹುದು. ನಿವೇಶನಕ್ಕಾಗಿ ಅರ್ಜಿ ಸಲ್ಲಿಸದವರು ಈಗಲೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಸಂಘಟನೆಯ ಬೇಡಿಕೆಗಳನ್ನು ಹಂತ ಹಂತವಾಗಿ ಪರಿಶೀಲಿಸಲಾಗುವದು. ಧರಣಿ ಮುಷ್ಕರವನ್ನು ಕೈ ಬಿಡುವಂತೆ ಮುಷ್ಕರ ನಿರತರಲ್ಲಿ ಕೋರಿದರು.

ಮಿನಿ ವಿಧಾನಸೌಧ ಆವರಣದಲ್ಲಿ ಮುಷ್ಕರ ಮಾಡುವಂತಿಲ್ಲ. ಇಲ್ಲಿಯೇ ಮುಷ್ಕರ ಮುಂದುವರೆದರೆ ಕಾನೂನಿನ ಕ್ರಮ ತೆಗೆದುಕೊಳ್ಳಬೇಕಾಗಬಹುದು ಎಂದು ಜವರೇಗೌಡ ಎಚ್ಚರಿಸಿದರು.

ಉಪ ವಿಭಾಗಾಧಿಕಾರಿಗಳ ಎಚ್ಚರಿಕೆಯನ್ನು ತಿರಸ್ಕರಿಸಿದ ಸಂಘಟನೆಯ ನಾಯಕರು ಮಿನಿ ವಿಧಾನಸೌಧದ ಮುಂದೆಯೇ ಧರಣಿ ಮುಷ್ಕರ ಮುಂದುವರೆಸುವದಾಗಿ ಹಠ ಹಿಡಿದರಲ್ಲದೆ ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರು ಬರುವ ತನಕ ಧರಣಿ ಮುಂದುವರೆಸುವದಾಗಿ ತಿಳಿಸಿದರು.

ಧರಣಿ ನಿರತರಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಇಂದು ಬೆಳಗಿನ ತನಕ 40 ಮಂದಿ ಅಶ್ವಸ್ಥರಾಗಿದ್ದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ತಂಡ ಅವರುಗಳಿಗೆ ಸರದಿ ಪ್ರಕಾರ ಚಿಕಿತ್ಸೆ ನೀಡಿದರಲ್ಲದೆ ಹೆಚ್ಚಿನವರಿಗೆ ಚುಚ್ಚುಮದ್ದು ನೀಡಿದರು.

ಧರಣಿ ನಿರತರಿಂದ ಯಾವದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು, ಮಹಿಳಾ ಪೊಲೀಸರು ಹಾಗೂ ಹೋಮ್‍ಗಾರ್ಡ್‍ಗಳು ಬಂದೋಬಸ್ತ್‍ನ್ನು ಕೈಗೊಂಡಿದ್ದಾರೆ.