ಮಡಿಕೇರಿ, ಡಿ.1: ಮಡಿಕೇರಿಯ ಶ್ರೀ ಓಂಕಾರೇಶ್ವರ, ಶ್ರೀ ಆಂಜನೇಯ ಮತ್ತು ಶ್ರೀ ಕೋಟೆ ಮಹಾಗಣಪತಿ ದೇವಾಲಯಗಳ ನಿಯೋಜಿತ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಎಸ್. ಎಸ್.ಸಂಪತ್ ಕುಮಾರ್ ಅವರು ಇದೀಗ ನಿವೃತ್ತರಾಗಿದ್ದಾರೆ. ಅವರನ್ನು ನಿನ್ನೆ ದಿನ ಜಿಲ್ಲಾಡಳಿತದಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಈ ಸಂದರ್ಭ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದ ಅಪರ ಜಿಲ್ಲಾಧಿಕಾರಿ ಜಗದೀಶ್ ಅವರು” ಸಂಪತ್ ಕುಮಾರ್ ಅವÀರು ಸೇವೆಯಲ್ಲಿದ್ದಾಗ ಸಾರ್ವಜನಿಕ ರೊಂದಿಗೆ ಸ್ನೇಹ ಪರತೆಯಿಂದಿದ್ದು, ಜನಾನುರಾಗಿಯಾಗಿದ್ದುದನ್ನು ಕಳೆದ 6 ತಿಂಗಳಿನಿಂದ ನಾನು ಗಮನಿಸಿದ್ದೇನೆ. ಅವರಂತೆ ಇತರ ಸರ್ಕಾರಿ ನೌಕರರೂ ಮಾದರಿ ಯಾಗಿರಬೇಕÀು” ಎಂದರು. ದೇಗುಲದ ಕರ್ತವ್ಯವನ್ನು ಜವಾಬ್ದಾರಿಕೆಯಿಂದ, ಸಮರ್ಪಕವಾಗಿ ಅವರು ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಶಿರಸ್ತೇದಾರ್ ಟಿ.ಕೆ. ಪ್ರಕಾಶ್ ಸ್ವಾಗತಿಸಿದರು. ಭಾಗಮಂಡಲ- ತಲಕಾವೇರಿ ವ್ಯವಸ್ಥಾಪನಾ ಸಮಿತಿಯ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ಜಿಲ್ಲಾಧಿಕಾರಿಯವರ ಆಪ್ತ ಸಹಾಯಕ ಷಣ್ಮುಖ, ಮುಜರಾಯಿ ಸಹಾಯಕ ಮಧುಕರ್, ದೇವರಾಜು, ಮೈಕೆಲ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ಅಣ್ಣಯ್ಯ ವಂದಿಸಿದರು.

ಕಿರು ಪರಿಚಯ

ಕಳೆದ 38 ವರ್ಷಗಳಿಂದ ಸಂಪತ್ ಕುಮಾರ್ ಅವರು ವಿವಿಧ ದೇವಾಲಯ ಸಮಿತಿಗಳ ವ್ಯವಸ್ಥಾ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. 1982 ರಲ್ಲಿ ಕೊಡಗು ದೇವಾಲಯ ವ್ಯವಸ್ಥಾಪನಾ ಸಮಿತಿಯ ವ್ಯವಸ್ಥಾಪಕರಾಗಿ ನೇಮಕಗೊಂಡರು. 1995 ರಲ್ಲಿ ಶ್ರೀ ಓಂಕಾರೇಶ್ವರ ದೇವಾಲಯದ ಬ್ರಹ್ಮ ಕಲಶ, 1999 ರಲ್ಲಿ ಶ್ರೀ ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ ಬ್ರಹ್ಮ ಕಲಶವಾದಾಗ ಇವರು ಸಮಿತಿಗಳೊಂದಿಗೆ ಸಹಕರಿಸಿದ್ದರು. ಇವರು ತಲಕಾವೇರಿ- ಭಾಗಮಂಡಲ ದೇವಾಲಯಗಳ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದಾಗ 2002 ರಿಂದ 2009 ರ ವರೆಗೆ ನಡೆದ ಜೀರ್ಣೋದ್ಧಾರ ಕಾರ್ಯಗಳಲ್ಲಿ ಸಮಿತಿ ಪ್ರಮುಖರೊಂದಿಗೆ ಸಕ್ರಿಯವಾಗಿ ಪಾಲ್ಗೊಂಡರು. ಬಳಿಕ ಮಡಿಕೇರಿಯ ಶ್ರೀ ಆಂಜನೇಯ ದೇವಾಲಯ ಜೀರ್ಣೋದ್ಧಾರ ಕಾರ್ಯದಲ್ಲಿಯೂ ಸಮಿತಿಯೊಂದಿಗೆ ಕೈ ಜೋಡಿಸಿ ಸಕ್ರಿಯವಾಗಿ ಭಾಗವಹಿಸಿದರು. ಇವರು ರೋಟರಿ ಕ್ಲಬ್ ಸದಸ್ಯರಾಗಿ, ಜಿಲ್ಲಾ ಜಾನಪದ ಪರಿಷತ್ ಖಜಾಂಚಿಯಾಗಿ, ಅಶ್ವಿನಿ ಆಸ್ಪತ್ರೆಯ ಟ್ರಸ್ಟಿ ಹಾಗೂ ಕಾರ್ಯದರ್ಶಿಯಾಗಿ, ಆಫೀಸರ್ಸ್ ಕ್ಲಬ್‍ನ ಕಾರ್ಯದರ್ಶಿಯಾಗಿ, ಶ್ರೀ ಕೋದಂಡ ರಾಮ ದೇವಾಲಯ ಟ್ರಸ್ಟ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪ್ರಮುಖ ಕ್ಷೇತ್ರಗಳಾಗಿವೆ.