ಸಿದ್ದಾಪುರ, ಡಿ.3: ಬೈಕಿನಲ್ಲಿ ಅಕ್ರಮವಾಗಿ ಶ್ರೀಗಂಧ ಸಾಗಾಟ ಮಾಡುತ್ತಿರುವದನ್ನು ಅರಣ್ಯ ಇಲಾಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕುಶಾಲನಗರ ಸಮೀಪದ ಅತ್ತೂರು ಶಾಖೆಯ ಗುಡ್ಡೆಹೊಸೂರು-ಹಾರಂಗಿ ಜಲಾಶಯಕ್ಕೆ ತೆರಳುವ ರಸ್ತೆಯಲ್ಲಿ (ಕೆಎ-12-ಹೆಚ್-740) ಬೈಕ್‍ನಲ್ಲಿ ಶ್ರೀಗಂಧ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಸುಳಿವಿನ ಮೇರೆಗೆ ಅತ್ತೂರು ಗ್ರಾಮದ ಜ್ಞಾನಗಂಗಾ ಶಾಲಾ ಪಕ್ಕದಲ್ಲಿರುವ ರಸ್ತೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೊಂಚು ಹಾಕಿ ಕುಳಿತಿದ್ದರು.

ಈ ಸಂದರ್ಭ ಇಬ್ಬರು ಆರೋಪಿಗಳು ಪ್ಲಾಸ್ಟಿಕ್ ಚೀಲದಲ್ಲಿ ಶ್ರೀಗಂಧವನ್ನು ಸುತ್ತಿ ಸಾಗಿಸುತ್ತಿರುವದು ಪತ್ತೆಯಾಗಿದ್ದು, ಆರೋಪಿಗಳು ಬೈಕನ್ನು ರಸ್ತೆ ಬದಿಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಅರಣ್ಯ ಇಲಾಖಾಧಿಕಾರಿಗಳು ಆರೋಪಿಗಳ ಗುರುತು ಪತ್ತೆ ಹಚ್ಚಿದ್ದು, ಮಧು(33) ಹಾಗೂ ಅನ್ನಿ, ಅಲಿಯಾಸ್ ರವೀಂದ್ರ(32) ಇವರ ಮೇಲೆ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಹಾದ್ರೆ ಹೇರೂರು ನಿವಾಸಿಗಳಾಗಿದ್ದಾರೆ.

ಆರೋಪಿಗಳು ಸಾಗಾಟ ಮಾಡುತ್ತಿದ್ದ ಶ್ರೀಗಂಧ 20 ಕೆ.ಜಿ. ಇದ್ದು, ರೂ. 1 ಲಕ್ಷ ಮೌಲ್ಯ ಎಂದು ಅಂದಾಜಿಸಲಾಗಿದೆ. ಮಾಲು ಹಾಗೂ ಕಳ್ಳತನಕ್ಕೆ ಬಳಸಿದ ಬೈಕನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದೆ. ಕಾರ್ಯಾಚರಣೆಯನ್ನು ಕುಶಾಲನಗರ ವಲಯ ಅರಣ್ಯಾಧಿಕಾರಿ ಸಿ.ಆರ್. ಅರುಣ್ ಮಾರ್ಗದರ್ಶನದಲ್ಲಿ ಅತ್ತೂರು ಶಾಖೆಯ ಉಪವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜ, ಅರಣ್ಯ ಸಿಬ್ಬಂದಿಗಳಾದ ವಿ.ಎಸ್. ಮಂಜೇಗೌಡ, ಮಹಾಂತೇಶ್, ಗಣೇಶ್ ಹಾಗೂ ಆರ್.ಆರ್.ಟಿ ತಂಡದ ಬಿ.ಪಿ. ರವಿ ಹಾಗೂ ಪದ್ಮನಾಭ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. -ವಾಸು