ಮಡಿಕೇರಿ, ಡಿ. 3: ರಾಜಕೀಯ, ಸಮಾಜಸೇವೆ ಸೇರಿದಂತೆ ಎಲ್ಲ ಕ್ಷೇತ್ರ, ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸುವ ಸಮರ್ಥ ನಾಯಕತ್ವ ಗುಣವನ್ನು ಕೇಂದ್ರ ಸಚಿವ ದಿ. ಅನಂತ್‍ಕುಮಾರ್ ಹೊಂದಿದ್ದರು ಎಂದು ಗಣ್ಯರು ಅಭಿಮತ ವ್ಯಕ್ತಪಡಿಸಿದ್ದಾರೆ.ನಗರ ಬಿಜೆಪಿ ವತಿಯಿಂದ ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ದಿ.ಅನಂತ್‍ಕುಮಾರ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಮರ್ಪಣಾ ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು, ಅನಂತ್‍ಕುಮಾರ್ ಅವರೊಂದಿಗೆ ತಮಗಿದ್ದ ನಿಕಟ ಸಂಪರ್ಕದ ಬಗ್ಗೆ ಸ್ಮರಿಸಿಕೊಂಡರು. ಅನಂತ್‍ಕುಮಾರ್ ಅವರಿಗೆ ಅನೇಕ ರಾಜ್ಯಗಳ ಉಸ್ತುವಾರಿ ನೀಡಲಾಗಿತ್ತಾದರೂ, ಕೊಟ್ಟ ಜವಾ ಬ್ದಾರಿಯನ್ನು ಯಶಸ್ವಿಯಾಗಿ ನಿಭಾ ಯಿಸಿದ್ದಾರೆ. ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದ ಅವರು, ಕಾವೇರಿ ವಿವಾದದಲ್ಲೂ ರಾಜಕೀಯ ಮಾಡದೆ ಕೇಂದ್ರ ಹಾಗೂ ರಾಜ್ಯಕ್ಕೆ ಕೊಂಡಿ ಯಂತೆ ಕೆಲಸ ಮಾಡಿದ್ದಾರೆಂದು ಹೇಳಿದರು.(ಮೊದಲ ಪುಟದಿಂದ) ಕೊಡಗಿನಲ್ಲಿ ಪ್ರಕೃತಿ ವಿಕೋಪ ಉಂಟಾದಾಗ ಆಸ್ಪತ್ರೆಯಲ್ಲಿದ್ದರೂ, ಪರಿಚಿತ ದಾನಿಗಳಿಂದ ರೂ. 90 ಲಕ್ಷ ಮೊತ್ತದ ಸಾಮಗ್ರಿಗಳನ್ನು ಸಂಗ್ರಹಿಸಿ, ಆಸ್ಪತ್ರೆಯಿಂದ 12 ಲಾರಿಗಳ ಮೂಲಕ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ ಎಂದು ತಿಳಿಸಿದರು. ಅವರ ಕಾರ್ಯ ವೈಖರಿಯನ್ನು ಯುವ ಪೀಳಿಗೆ ಅಳವಡಿಸಿಕೊಂಡು ಹೋಗಬೇಕೆಂದು ಕರೆ ನೀಡಿದರು.

ಶಕ್ತಿ ಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಮಾತನಾಡಿ ಅನಂತ್‍ಕುಮಾರ್ ಓರ್ವ ವ್ಯಕ್ತಿಯಲ್ಲ ಒಂದು ಶಕ್ತಿ ಎಂದೇ ಹೇಳಬಹುದು. ಅವರ ಸಾಧನೆಗಳು ಎಲ್ಲರಿಗೂ ಮಾರ್ಗದರ್ಶನವಾಗಿದೆ ಎಂದರು. ವಾಜಪೇಯಿ, ಅಡ್ವಾಣಿ, ನರೇಂದ್ರ ಮೋದಿಯವರೊಂದಿಗೂ ನಿಕಟ ಸಂಪರ್ಕ ಹೊಂದಿದ್ದ ಅವರು, ರಾಜಕೀಯದಲ್ಲಿ ವಿರೋಧ ಕಂಡಿಲ್ಲ, ಯಾರಿಗೂ ನೋವುಂಟು ಮಾಡುವ ಕೆಲಸ ಮಾಡಿಲ್ಲ; ಇದೀಗ ಅವರ ಧರ್ಮಪತ್ನಿಯ ಸಮಾಜಸೇವೆ ಮುಂದುವರಿಯಲೆಂದು ಆಶಿಸಿದರು.

ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಮಾತನಾಡಿ, ಸಣ್ಣ ವಯಸ್ಸಿನಲ್ಲಿಯೇ ಮೇಧಾವಿಗಳ ನಿಕಟಸಂಪರ್ಕ ಹೊಂದಿದ್ದ ಅನಂತ್‍ಕುಮಾರ್ ಮುಂದೊಂದು ದಿನ ಬಿಜೆಪಿಯಿಂದ ಮುಖ್ಯಮಂತ್ರಿ ಗಳಾಗುವ ಅವಕಾಶವಿತ್ತು ಎಂದು ಹೇಳಿದರು. ಅನಂತ್‍ಕುಮಾರ್ ಅವರೊಂದಿಗೆ ಸಚಿವರುಗಳಾಗಿದ್ದ ಅಂಬರೀಶ್ ಹಾಗೂ ಜಾಫರ್ ಷರೀಫ್ ಅವರುಗಳಿಗೂ ಇಂದು ರಾಜಕೀಯ ರಹಿತವಾಗಿ ಸಂತಾಪ ಸೂಚಿಸಿರುವದು ದೊಡ್ಡತನವೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಅಪ್ಪಚ್ಚುರಂಜನ್ ಮಾತನಾಡಿ ವಿರೋಧ ಪಕ್ಷದವರು ಏನೇ ಪ್ರಶ್ನೆ ಕೇಳಿದರೂ, ರೆಡಿಮೇಡ್ ಉತ್ತರ ಅನಂತ್‍ಕುಮಾರ್ ಅವರಲ್ಲಿ ಇರುತಿತ್ತು. ಹೊಸ ಆವಿಷ್ಕಾರದ ಚಿಂತನೆ ಉಳ್ಳವರಾಗಿದ್ದರೆಂದು ಹೇಳಿದರು.

ಬಿಜೆಪಿಗೆ ‘ಮೈನ್ ಬ್ರೈನ್’ ಆಗಿದ್ದರು ಯಾವದೇ ಗೊಂದಲ, ತೊಂದರೆ ಎದುರಾದಾಗ ಉತ್ತಮ ರೀತಿಯಲ್ಲಿ ನಿಭಾಯಿಸುತ್ತಿದ್ದರು. ಪಕ್ಷ ಕಟ್ಟಲು ಸಾಕಷ್ಟು ಶ್ರಮಿಸಿದ್ದಾರೆ. ಸಚಿವರಾಗಿ ಹಲವಷ್ಟು ಉತ್ತಮ ಸೇವಾ ಕಾರ್ಯ ಮಾಡಿದ್ದಾರೆಂದು ಹೇಳಿದರು. ಬಡವರೂ ಕೂಡ ವಿಮಾನದಲ್ಲಿ ಹೋಗಬೇಕೆಂದ ದೃಷ್ಟಿಯಿಂದ ವಿಮಾನ ದರ ಕಡಿತ, ಔಷಧಿ ಬೆಲೆ ಇಳಿಕೆಯೊಂದಿಗೆ ಬಡಮಕ್ಕಳಿಗೆ ಅಕ್ಷರದಾಸೋಹ ನೀಡುತ್ತಿದ್ದರು. ಬಡವರ ಬಗ್ಗೆ ಕಾಳಜಿಯುಳ್ಳವರಾಗಿದ್ದರೆಂದರು.

ಇದೇ ಸಂದರ್ಭ ಅಗಲಿದ ಮಾಜಿ ಸಚಿವರುಗಳಾದ ಅಂಬರೀಶ್ ಹಾಗೂ ಜಾಫರ್ ಷರೀಫ್ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಲಾಯಿತು. ಪ್ರಮುಖರಾದ ಎಂ.ಬಿ. ದೇವಯ್ಯ, ಮನುಮುತ್ತಪ್ಪ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಎಸ್.ಜಿ. ಮೇದಪ್ಪ, ಅಭಿಮನ್ಯುಕುಮಾರ್, ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್, ಅರುಣ್ ಭೀಮಯ್ಯ, ತಳೂರು ಕಿಶೋರ್‍ಕುಮಾರ್, ಮಹೇಶ್ ಜೈನಿ ಇನ್ನಿತರರಿದ್ದರು.

ಶಿವರಾಂ ವೈಯಕ್ತಿಕ ಗೀತೆ ಹಾಡಿದರೆ, ರಾಬಿನ್ ದೇವಯ್ಯ ನಿರೂಪಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಪ್ರಾಸ್ತಾವಿಕ ಮಾತನಾಡಿ, ಅನಂತ್‍ಕುಮಾರ್ ಅವರು ರೈತರಿಗೆ ರಸಗೊಬ್ಬರ ಒದಗಿಸಲು, ಸಾಮಾನ್ಯರಿಗೆ ಕಡಿಮೆ ದರದಲ್ಲಿ ಔಷಧಿ ವೈದ್ಯಕೀಯ ಚಿಕಿತ್ಸಾ ಸಾಮಗ್ರಿಗಳನ್ನು ಒದಗಿಸಲು ಕೈಗೊಂಡ ಸೇವೆಯನ್ನು ಸ್ಮರಿಸಿದರು. ವಿ.ಕೆ. ಲೋಕೇಶ್ ಸ್ವಾಗತಿಸಿ, ಬಾಲಚಂದ್ರ ಕಳಗಿ ವಂದಿಸಿದರು.