ವೀರಾಜಪೇಟೆ, ಡಿ. 3: ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಮಾದರಿ ಯೋಗ್ಯವಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಶಾಖೆಯ ಕಾರ್ಯದರ್ಶಿ ಕೆ.ಪಿ.ಮುಹಮ್ಮದ್ ಇಸ್ಹಾಕ್ ಹೇಳಿದ್ದಾರೆ. ಅವರು ವಿರಾಜಪೇಟೆಗೆ ಸಮೀಪದ ಅರಮೇರಿಯ ಶ್ರೀ ಕಳಂಚೇರಿ ಮಠದಲ್ಲಿ ಹೊಂಬೆಳಕು ಮಾಸಿಕ ತತ್ವ ಚಿಂತನ ಗೋಷ್ಠಿಯ 183ನೇ ಕಿರಣದಲ್ಲಿ ‘ಪ್ರವಾದಿ ಮುಹಮ್ಮದ್ ಮಾನವಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ‘ಧರ್ಮವನ್ನು ಸದುಪಯೋಗಪಡಿಸಿಕೊಳ್ಳುವದಕ್ಕಿಂತ ಹೆಚ್ಚಾಗಿ ದುರುಪಯೋಗ ಪಡಿಸುವವರ ಸಂಖ್ಯೆ ವೃದ್ಧಿಸುತ್ತಿರುವದು ಆತಂಕಕಾರಿ ಬೆಳವಣಿಗೆ ಎಂದರು.

ನಿವೃತ್ತ ಮುಖ್ಯಶಿಕ್ಷಕ ಮತ್ತು ಯೋಗ ಸಂಪನ್ಮೂಲ ವ್ಯಕ್ತಿ ಪಿ.ಎ.ಲಕ್ಷ್ಮಿನಾರಾಯಣ ಕಾರ್ಯಕ್ರಮವನ್ನು ಉದ್ಘಾಟಿಸಿ, ‘ಪ್ರತಿಯೊಬ್ಬ ವ್ಯಕ್ತಿಯು ತನ್ನ ಆರೋಗ್ಯ ಮತ್ತು ಪ್ರಕೃತಿಯ ಮೇಲ್ವಿಚಾರಕನಾಗಿದ್ದು. ಇತರ ಜೀವಿಗಳೊಂದಿಗೆ ಸಹಬಾಳ್ವೆಯನ್ನು ನಡೆಸಬೇಕು ಎಂಬದು ಪ್ರವಾದಿಯವರ ಶಿಕ್ಷಣವಾಗಿದೆ ಎಂದರು.

ದಿವ್ಯ ಸಾನಿದ್ಯವನ್ನು ವಹಿಸಿ ಆಶೀರ್ವಚನ ನೀಡಿದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ‘ಧರ್ಮಗಳು ಶಾಂತಿ ಮತ್ತು ನೆಮ್ಮದಿಯ ಬದುಕನ್ನು ಕಲಿಸುತ್ತದೆ. ಆದರೆ ಆಧುನಿಕ ಮನುಷ್ಯರು ತಮ್ಮ ಹೊಣೆಗಾರಿಕೆಯನ್ನು ಅರಿಯದೆ ಇತರರ ಹಕ್ಕುಗಳನ್ನು ಕಸಿಯುವದರಿಂದ ಸಮಸ್ಯೆಗಳು ಉದ್ಭವಿಸುತ್ತದೆ’ ಎಂದರು.

ವೈಲಾಶ್ ಕೊಡಗು ಹಾಗೂ ಹೆಚ್.ಆರ್. ಲೋಕೇಶ್ ಸ್ವರಚಿತ ಕವನವನ್ನು ವಾಚಿಸಿದರು. ಪಿ.ಕೆ.ಅಬ್ದುಲ್ ರೆಹೆಮಾನ್ ಸ್ವಾಗತಿಸಿದರು. ಕೆ.ಟಿ.ಬಷೀರ್ ಧನ್ಯವಾದವಿತ್ತರು.