ಕೂಡಿಗೆ, ಡಿ.3: ಸೀಗೆ ಹೊಸೂರು ಗ್ರಾಮದಲ್ಲಿ ಕಾಡಾನೆ ಧಾಳಿ ನಡೆಸಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಭುವನಗಿರಿ, ಸೀಗೇಹೊಸೂರು ಹಾಗೂ ಹೆಣಸೇಪಾತೆ ಗ್ರಾಮದಲ್ಲಿ ಕಳೆದೆರಡು ದಿನದಿಂದ ಕಾಡಾನೆ ಧಾಳಿ ನಡೆಸಿದೆ. ಕಾಡಾನೆಗಳು ಕಾಡಿನಿಂದ ದಾಟದ ಹಾಗೆ ಸಮೀಪದಲ್ಲೇ ಕಂದಕಗಳನ್ನು ನಿರ್ಮಿಸಲಾಗಿದೆ. ಆದರೆ ಒಂದು ಜಾಗದಲ್ಲಿ ಬೃಹತ್ ಬಂಡೆಯಿದ್ದು, ಅರಣ್ಯ ಇಲಾಖೆಯವರು ತೆರವುಗೊಳಿಸದೇ ಇರುವದರಿಂದ ಕಾಡಾನೆಗಳು ಈ ಮೂಲಕ ದಾಟಿಬಂದು ರೈತರ ಜಮೀನಿಗೆ ನುಗ್ಗಿ ಬೆಳೆ ನಷ್ಟಪಡಿಸಿವೆ.
ಈ ವ್ಯಾಪ್ತಿಯ ಗೋಪಾಲ, ಕೃಷ್ಣ, ಮಂಜೇಗೌಡ, ರಾಜಪ್ಪ ಸೇರಿದಂತೆ ಹತ್ತಕ್ಕೂ ಅಧಿಕ ರೈತರ ಜಮೀನಿನಲ್ಲಿದ್ದ ಬೆಳೆಯನ್ನು ನಷ್ಟಪಡಿಸಿವೆ. ಸಂಬಂಧಪಟ್ಟ ಅರಣ್ಯ ಇಲಾಖೆ ಯವರು ಸ್ಥಳ ಪರಿಶೀಲಿಸಿ ರೈತರಿಗೆ ಪರಿಹಾರ ಒದಗಿಸುವಲ್ಲಿ ಕಾರ್ಯೋ ನ್ಮುಖರಾಗಬೇಕೆಂದು ರೈತರು ಆಗ್ರಹಿಸಿದ್ದಾರೆ.