ಮಡಿಕೇರಿ, ಡಿ. 3: ಕೊಡಗಿನ ಕುಲದೇವಿ ಕಾವೇರಿ ಮಾತೆಯ ಕ್ಷೇತ್ರ ತಲಕಾವೇರಿಯಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಗೋಚರಿಸಿರುವ ದೋಷಗಳ ಪರಿಹಾರ ಕಾರ್ಯವು ತಾ. 9 ರಿಂದ ಚಾಲನೆಗೊಳ್ಳಲಿದೆ ಎಂದು, ಕ್ಷೇತ್ರ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ತಿಳಿಸಿದ್ದಾರೆ. ಇಲ್ಲಿನ ಪತ್ರಿಕಾ ಭವನದಲ್ಲಿ ಇಂದು ಅಷ್ಟಮಂಗಲ ಪ್ರಶ್ನೆ ಹೊತ್ತಿಗೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದರು.‘ಶಕ್ತಿ’ ಪ್ರಧಾನ ಸಂಪಾದಕರು ಹಾಗೂ ಕ್ಷೇತ್ರದ ಹಿಂದಿನ ಪುನರ್ ಪ್ರತಿಷ್ಠಾಪನಾ ಸಮಿತಿ ಮಾಜಿ ಕಾರ್ಯದರ್ಶಿ ಜಿ. ರಾಜೇಂದ್ರ ಅವರು ಹೊತ್ತಿಗೆ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಕಾವೇರಿ ತಾಯಿಯ ತವರು ಎನ್ನುವ ಮಾತ್ರದಿಂದ ಕೊಡಗಿಗೆ ವಿಶೇಷ ಗೌರವವಿದೆ ಎಂದು ನೆನಪಿಸುತ್ತಾ, ಪಾಪಹಾರಿಣಿ ಹಾಗೂ ಮೋಕ್ಷದಾಯಿನಿ ಕಾವೇರಿ ಮಾತೆಯ ಸೇವೆಯಲ್ಲಿ ಎಲ್ಲರೂ ಕೈ ಜೋಡಿಸುವಂತೆ ಕರೆ ನೀಡಿದರು. (ಮೊದಲ ಪುಟದಿಂದ) ಅಷ್ಟಮಂಗಲ ಪ್ರಶ್ನೆ ವೇಳೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕಂಡು ಬಂದಿರುವ ದೋಷಗಳ ಪರಿಹಾರದಿಂದ ಲೋಕ ಕಲ್ಯಾಣ ಉಂಟಾಗಲೆಂದು ಆಶಿಸಿದರು.
ಅಷ್ಟಮಂಗಲ ಪ್ರಶ್ನೆ ವಿಚಾರಗಳು ಒಂದು ದಾಖಲೆಯಾಗಿ ಉಳಿಯಲು ಈ ಹೊತ್ತಿಗೆ ಸಹಕಾರಿಯೆಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಇದೇ ವೇಳೆ ಅಭಿಪ್ರಾಯಪಟ್ಟರು. ಕಾವೇರಿ ಕ್ಷೇತ್ರದ ದೋಷಗಳು ನಿವಾರಣೆಗೊಂಡು ಕ್ಷೇತ್ರದ ಅಭಿವೃದ್ಧಿಯಿಂದ ಎಲ್ಲರಿಗೆ ಒಳಿತಾಗಲಿ ಎಂದು ಅವರು ಮಾರ್ನುಡಿದರು.
ಹಿರಿಯರಾದ ಕೊಕ್ಕಲೇರ ಕಾರ್ಯಪ್ಪ ಕ್ಷೇತ್ರದ ಅಷ್ಟಮಂಗಲ ಪ್ರಶ್ನೆ ಹೊತ್ತಿಗೆ ಬಿಡುಗಡೆ ಶ್ಲಾಘನೀಯ ಎಂದರಲ್ಲದೆ, ಎಲ್ಲ ದೋಷ ನಿವಾರಣೆಗಾಗಿ ವ್ಯವಸ್ಥಾಪನಾ ಸಮಿತಿ ಕೈಗೊಂಡಿರುವ ಕಾರ್ಯಕ್ಕೆ ಭಕ್ತರ ಸಹಕಾರ ಅವಶ್ಯಕವೆಂದರು. ಅಲ್ಲದೆ, ಕೆ.ಆರ್.ಎಸ್. ನಲ್ಲಿ ಕಾವೇರಿ ಪ್ರತಿಮೆ ನಿರ್ಮಾಣ ಅಪ್ರಸ್ತುತ; ಈ ಬಗ್ಗೆಯೂ ಸಮಿತಿ ಸರಕಾರದ ಗಮನ ಸೆಳೆಯಬೇಕೆಂದರು.
ಕಾರ್ಯಕ್ರಮ ವಿವರ: ಕಳೆದ ಫೆಬ್ರವರಿಯಿಂದ ಅಧಿಕಾರ ವಹಿಸಿಕೊಂಡಿರುವ ವ್ಯವಸ್ಥಾಪನಾ ಸಮಿತಿ ಇದುವರೆಗೆ ಕೈಗೊಂಡಿರುವ ಕೆಲಸಗಳ ವಿವರ ನೀಡಿದ ಅಧ್ಯಕ್ಷರು, ತಾ. 9 ರಿಂದ ನಡೆಯುವ ದೇವತಾ ಕೈಂಕರ್ಯಗಳ ಮಾಹಿತಿ ನೀಡಿದರು. ನೀಲೇಶ್ವರ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ತಾ. 9 ರ ಬೆಳಿಗ್ಗೆ ಅಗಸ್ತ್ಯೇಶ್ವರನಿಗೆ ರುದ್ರಾಭಿಷೇಕ, ಗಣಪತಿಗೆ ಅಪ್ಪಕಜ್ಜಾಯ, ಕಾವೇರಿ ಮಾತೆಗೆ ಹಾಗೂ ಪರಿವಾರ ದೇವತೆಗಳಿಗೆ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಗಣಪತಿ ಹೋಮ, ಆಶ್ಲೇಷ ಬಲಿ, ಸಂಜೆ ಸುದರ್ಶನ ಹೋಮ ಹಾಗೂ ಪ್ರೇತಗಳ ಆವಾಹನೆ ಮತ್ತು ಉಚ್ಚಾಟನೆ ಜರುಗಲಿದೆ.
ತಾ. 10 ರಂದು ಬೆಳಿಗ್ಗೆಯಿಂದ ತಿಲಾಹೋಮ, ಪವಮಾನ ಹೋಮ, ಮೃತ್ಯುಂತಜಯ ಹೋಮ, ಸಾಯುಜ್ಯದೊಂದಿಗೆ ಸಂಜೆ ಪ್ರಾಸಾದ ಶುದ್ಧಿ, ವಾಸ್ತು ರಕ್ಷೋಘ್ನ ಹೋಮ, ವಾಸ್ತುಬಲಿ, ಬಾಲಾಲಯ ಪರಿಗ್ರಹ, ಬಾಲಬಿಂಬ ಜಲಾಧಿವಾಸ ನಡೆಯಲಿದೆ. ತಾ. 11 ರಂದು ಬೆಳಿಗ್ಗೆ ಗಣಪತಿ ಹೋಮ, ವಾರ್ಷಿಕ ಸಂಪ್ರೋಕ್ಷಣೆ, ಸಂಹಾರ ತತ್ವ ಹೋಮ, ತತ್ವ ಕಲಶ ಪೂಜೆ, ಅನುಜ್ಞಾ ಕಲಶ ಪೂಜೆ, ಕಲಶಾಭಿಷೇಕ ಸಂಹಾರ ತತ್ವ ಕಲಶಾಭಿಷೇಕ, ಜೀವಕಲಶ ಪೂಜೆ, ಜೀವೋಧ್ವಾಸನೆ, ಜೀವ ಕಲಶ, ಶಯ್ಯಾಗಮನ, ಶಯನ ನೆರವೇರಲಿದೆ. ಸಂಜೆ ಕುಂಬೇಶ ಕರ್ಕರಿ ಕಲಶ ಪೂಜೆ, ಆಧಿವಾಸ ಹೋಮ, ಧಾನ್ಯಧಿವಾಸ, ದ್ರವ್ಯಕಲಶಪೂಜೆ, ಕಲಶಾಧಿವಾಸ ಜರುಗಲಿದೆ.
ತಾ. 12 ರಂದು ಬೆಳಿಗ್ಗೆ ಗಣಪತಿ ಹೋಮ, ಅಪರಾಹ್ನ 12.47ಕ್ಕೆ ಮೀನ ಲಗ್ನದಲ್ಲಿ ಬಾಲಾಲಯ ಪ್ರತಿಷ್ಠೆ, ಜೀವಕಲಶಾಭಿಷೇಕ, ಅನಂತರ ಮಹಾಪೂಜೆ, ಪ್ರಸಾದ, ಅನ್ನಸಂತರ್ಪಣೆ ನೆರವೇರಲಿದೆ ಎಂದು ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಮಾಹಿತಿ ನೀಡಿದರು. ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ದರು. ಸಮಿತಿ ಸದಸ್ಯರುಗಳಾದ ಡಾ.ಎಸ್.ಎಂ. ಕಾವೇರಪ್ಪ, ಉದಿಯಂಡ ಸುಭಾಷ್, ಕೆದಂಬಾಡಿ ರಮೇಶ್, ಪಪ್ಪು ತಿಮ್ಮಯ್ಯ, ಏಕೀಕರಣ ರಂಗದ ತಮ್ಮು ಪೂವಯ್ಯ ಮೊದಲಾದವರು ಹಾಜರಿದ್ದರು. ಸದಸ್ಯೆ ಮೀನಾಕ್ಷಿ ಪ್ರಾರ್ಥನೆಯೊಂದಿಗೆ ತಕ್ಕರಾದ ಇನ್ನೋರ್ವ ಸದಸ್ಯ ಕೋಡಿ ಮೋಟಯ್ಯ ವಂದಿಸಿದರು.