ಮಡಿಕೇರಿ, ಡಿ. 3: ಮಡಿಕೇರಿ ನಗರಸಭಾ ಅಧ್ಯಕ್ಷರಾಗಿರುವ ಕಾವೇರಮ್ಮ ಸೋಮಣ್ಣ ಅವರನ್ನು ನಿಂದಿಸುವದರೊಂದಿಗೆ ನಗರಸಭಾ ಸದಸ್ಯರು ಅವಮಾನ ಮಾಡಿದ್ದಾರೆಂದು ನಗರಸಭಾ ಸದಸ್ಯರ ನಡವಳಿಕೆಯನ್ನು ಖಂಡಿಸಿ ನಗರ ಮಹಿಳಾ ಕಾಂಗ್ರೆಸ್ ವತಿಯಿಂದ ನಗರಸಭಾ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪೊರಕೆ ಹಿಡಿದು ನಗರಸಭಾ ಕಚೇರಿ ಎದುರು ಪ್ರತಿಭಟಿಸಿದ ಕಾರ್ಯಕರ್ತರು ನಗರಸಭಾ ಸದಸ್ಯ ಉಣ್ಣಿಕೃಷ್ಣ ಅವರು, ಓರ್ವ ಮಹಿಳೆಯನ್ನು ಸಾರ್ವಜನಿಕವಾಗಿ ನಿಂದಿಸಿ ಅವಮಾನ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು, ರೇಸ್‍ಕೋರ್ಸ್ ರಸ್ತೆ ಅಗಲೀಕರಣ ಸಂಬಂಧ ಕಳೆದ ನ. 18 ರಂದು ಕೆಲಸ ಆರಂಭಿಸಿದಾಗ ನಗರಸಭೆ ಉಪಾಧ್ಯಕ್ಷ ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣ ಅವರುಗಳು ಆಗಮಿಸಿ ಕೆಲಸಕ್ಕೆ ತಡೆಯೊಡ್ಡಿದ್ದಲ್ಲದೆ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಇದು ತುಂಬಾ ಬೇಸರ ತಂದಿದೆ. ಓರ್ವ ಮಹಿಳೆಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದರು.

ನಗರಸಭಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷ ಗೀತಾ ಲಿಂಗಪ್ಪ ಮಾತನಾಡಿ, ಓರ್ವ ಮಹಿಳೆ ನಗರಸಭಾ ಅಧ್ಯಕ್ಷರೂ ಆಗಿರುವ ಕಾವೇರಮ್ಮ ಸೋಮಣ್ಣ ಅವರನ್ನು ಉಣ್ಣಿಕೃಷ್ಣ ನಿಂದಿಸಿದ್ದಾರೆ.

ಈ ಬಗ್ಗೆ ಅಧ್ಯಕ್ಷರು ಪೊಲೀಸ್ ದೂರು ನೀಡಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು; ಉಣ್ಣಿಕೃಷ್ಣ ಅವರನ್ನು ನಗರಸಭಾ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.

ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟ ಮಾಡುವದಾಗಿ ಹೇಳಿದರು. ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫ್ಯಾನ್ಸಿ, ಕಾರ್ಯಕರ್ತರು ಪಾಲ್ಗೊಂಡಿದ್ದರು.