ಮಡಿಕೇರಿ, ಡಿ. 2: ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ ಸರಕಾರ ಹೆದ್ದಾರಿ ನಿರ್ಮಾಣಕ್ಕೆ ಆದ್ಯತೆ ಕಲ್ಪಿಸಿದ್ದು, ಇಂತಹ ಕೆಲಸಗಳಿಗೆ ವಿರೋಧಿಸುವವರಿದ್ದರೂ, ಅವುಗಳನ್ನು ಲೆಕ್ಕಿಸದೆ ಮೈಸೂರು - ಮಡಿಕೇರಿ ನಡುವೆ ಚತುಷ್ಪಥ ರಸ್ತೆಯೊಂದಿಗೆ ಇತರೆಡೆ ಸಂಪರ್ಕ ಸಾಧಿಸುವ ಹೆದ್ದಾರಿಗಳ ನಿರ್ಮಾಣ ಕೈಗೊಳ್ಳುವದಾಗಿ ಕೊಡಗು - ಮೈಸೂರು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ. ನ. 30 ರಂದು ಕೋಟೆಯಲ್ಲಿ ಜರುಗಿದ ಅಭಿವೃದ್ಧಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿಗೆ ಬರುವ ವಾಹನಗಳು, ಪ್ರವಾಸೋದ್ಯಮ, ತುರ್ತು ಸಂದರ್ಭಗಳಲ್ಲಿ ಜನತೆಯ ಜೀವರಕ್ಷಣೆಗೆ ಆದ್ಯತೆ ನೀಡುವ ದಿಸೆಯಲ್ಲಿ ರಸ್ತೆ ಅಗಲೀಕರಣ ತೀರಾ ಅವಶ್ಯಕವೆಂದು ಪ್ರತಿಪಾದಿಸಿದರು.
ಉತ್ತರ ಕೊಡಗಿನ ಕೊಡ್ಲಿಪೇಟೆ ಮುಖಾಂತರ ವೀರಾಜಪೇಟೆ ಮಾರ್ಗವಾಗಿ ಮಾಕುಟ್ಟ ತನಕ ಹಾಗೂ ಮೈಸೂರು - ಮಾಣಿ ಹೆದ್ದಾರಿಯ ಅಭಿವೃದ್ಧಿ ಯೋಜನೆಗಳು ಪ್ರಗತಿ ಹಂತದಲ್ಲಿದ್ದು, ಸಕಾಲದಲ್ಲಿ ಕೊಡಗಿನ ಜನತೆ ಮೈಸೂರು, ಮಂಗಳೂರು ಹಾಗೂ ಕಣ್ಣೂರು ತಲಪಲು ಅನುಕೂಲವಾಗುವಂತೆ ಕೆಲಸ ಕೈಗೊಳ್ಳಲಾಗುವದು ಎಂದು ಸುಳಿವು ನೀಡಿದರು.
ಕೊಡಗಿನ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ವೇಳೆ ಒಂದು ಮರ ತೆರವುಗೊಂಡರೆ ಮತ್ತೆ 10 ಮರಗಳ ಬೆಳವಣಿಗೆಗೆ ಗಮನ ಹರಿಸಲಾಗುವದು ಎಂದ ಅವರು, ಕೊಡಗಿನ ಅಭಿವೃದ್ಧಿ ವಿಚಾರದಲ್ಲಿ ಯಾರೂ ವಿರೋಧ ಅಥವಾ ರಾಜಕೀಯ ಮಾಡದಂತೆ ತಿಳಿ ಹೇಳಿದರು.
ವಿಶೇಷ ಕಾಳಜಿ : ಹೆದ್ದಾರಿ ನಿರ್ಮಾಣದ ಸಂದರ್ಭ ಯಾರೊಬ್ಬರ ಖಾಸಗಿ ಜಮೀನು ಹೊಂದಿಕೊಂಡರೂ ಕೇಂದ್ರ ರಸ್ತೆ ಅಭಿವೃದ್ಧಿ ಪ್ರಾಧಿಕಾರದಿಂದ ಅಗತ್ಯ ಪರಿಹಾರ ಕಲ್ಪಿಸಲಿದ್ದು, ಅಲ್ಲಲ್ಲಿ ಮೇಲ್ಸೇತುವೆಗಳೊಂದಿಗೆ ಜನತೆಗೆ ತೊಂದರೆ ಉಂಟಾಗದಂತೆ ವಿಶೇಷ ಕಾಳಜಿ ತೆಗೆದುಕೊಳ್ಳಲಾಗುವದು ಎಂದು ಸಂಸದರು ಪುನರುಚ್ಚರಿಸಿದರು.
ಆ ದಿಸೆಯಲ್ಲಿ ಮಡಿಕೇರಿ ನಗರವನ್ನು ಪ್ರವೇಶಿಸುವ ಅರಣ್ಯ ಭವನ ಬಳಿಯಿಂದ ಭಾಗಮಂಡಲ ಸಂಪರ್ಕ ರಸ್ತೆ ತಿರುವಿನ ತನಕವೂ ಚತುಷ್ಪಥ ಮಾರ್ಗದ ಸಂದರ್ಭ ಮೇಲ್ಸೇತುವೆ ನಿರ್ಮಾಣಗೊಳ್ಳುವದಾಗಿ ಅವರು ಉದಾಹರಿಸಿದರು. ತಾ. 6 ರಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಸಂಸದರುಗಳಾದ ನಳಿನ್ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಜಿಲ್ಲೆಗೆ ಭೇಟಿ ನೀಡಲಿದ್ದು, ಈ ಸಂದರ್ಭ ಕೊಡಗಿನ ಸದ್ಯದ ಪರಿಸ್ಥಿತಿ ಹಾಗೂ ಅಭಿವೃದ್ಧಿ ಬಗ್ಗೆ ಹೆಚ್ಚಿನ ಚರ್ಚೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದರು.