ಮಡಿಕೇರಿ, ಡಿ. 3: ವಿಶೇಷಚೇತನರ ಬಗ್ಗೆ ಸಮಾಜದಲ್ಲಿ ದಯೆ, ಕರುಣೆ ತೋರಿಸಿದರಷ್ಟೇ ಸಾಲದು, ಆತ್ಮಸ್ಥೈರ್ಯ ತುಂಬಬೇಕು. ಎಲ್ಲರಂತೆ ಗೌರವಿಸಬೇಕು. ವಿಶೇಷಚೇತನರಿಗೆ ಉತ್ತಮ ವಾತಾವರಣ ಸೃಷ್ಠಿ ಮಾಡುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಹೆಚ್ಚಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿಶೇಷ ಮಕ್ಕಳ ಶಾಲೆಗಳು, ವಿಶೇಷಚೇತನರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್, ಕೊಡಗು ಶಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಓಂಕಾರ ಸದನದಲ್ಲಿ ನಡೆದ ವಿಶ್ವ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾನೂನು ಸೇವಾ ಪ್ರಾಧಿಕಾರದಿಂದ ವಿಶೇಷಚೇತನರಿಗೆ, ಹಿರಿಯ ನಾಗರಿಕರು, ಮಹಿಳೆಯರು, ಬಡವರಿಗೆ ಜನತಾ ನ್ಯಾಯಾಲಯದ ಮೂಲಕ ಕಾನೂನು ಸೇವೆಯನ್ನು ಉಚಿತವಾಗಿ ನೀಡಲಾಗುತ್ತದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅವರು ಸಲಹೆ ಮಾಡಿದರು.
ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಬದುಕುವ ಹಕ್ಕು ಕಾನೂನಿನಡಿಯಲ್ಲಿದೆ. ಹಾಗೆಯೇ ವಿಶೇಷಚೇತನರಿಗೆ ಹಕ್ಕು, ಮೀಸಲಾತಿ ಹಾಗೂ ರಕ್ಷಣೆಯಲ್ಲಿ ಸಮಾನ ಪಾಲು ಕಾನೂನಡಿಯಲ್ಲಿದೆ. ಇವುಗಳನ್ನು ಪ್ರತಿಯೊಬ್ಬರು ಗೌರವಿಸುವಂತೆ ಆಗಬೇಕು ಎಂದು ಅವರು ತಿಳಿಸಿದರು.
ವಿಶೇಷಚೇತನರನ್ನು ಸಮಾಜದಲ್ಲಿ ನೋಡುವ ದೃಷ್ಟಿ ಬದಲಾಗಬೇಕು. ವಿಶೇಷಚೇತನರು ದುರ್ಬಲರೆಂದು ಭಾವಿಸದೆ ಇತರರಂತೆ ಬದುಕು ಕಟ್ಟಿಕೊಳ್ಳುವಂತಾಗಲು ಅವಕಾಶ ನೀಡಬೇಕಿದೆ. ವಿಶೇಷಚೇತನರ ಬಗ್ಗೆ ಅನುಕಂಪದ ಜೊತೆಗೆ ಅವಕಾಶವನ್ನು ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ವಿಶೇಷಚೇತನರಿಗೆ ಸ್ಪಂದಿಸುವ ಮನೋಭಾವ ಪ್ರತಿಯೊಬ್ಬರಲ್ಲಿಯೂ ಇರಬೇಕು ಎಂದು ಅವರು ಹೇಳಿದರು.
ವಿಶ್ವದಲ್ಲಿ ಹಾಗೂ ದೇಶದಲ್ಲಿ ಹಲವು ಮಂದಿ ವಿಶೇಷಚೇತನರು ಮಹತ್ತರ ಸಾಧನೆ ಮಾಡಿದ್ದಾರೆ. ಇವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡಾಗ ವಿಶೇಷಚೇತರು ಮತ್ತೊಬ್ಬರ ರೀತಿ ಸಾಧನೆ ಮಾಡಬೇಕು ಎಂಬ ಮನೋಭಾವ ಬರುತ್ತದೆ ಎಂದು ನೂರುನ್ನಿಸ ಅವರು ಅಭಿಪ್ರಾಯಪಟ್ಟರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಮಲ್ಲೇಸ್ವಾಮಿ ಅವರು ಮಾತನಾಡಿ ವಿಶೇಷಚೇತನರಲ್ಲಿ ವಿಶ್ವಾಸ ತುಂಬುವ ಕೆಲಸವನ್ನು ಪೋಷಕರು ಸೇರಿದಂತೆ ಸಮಾಜದ ಎಲ್ಲರೂ ಮಾಡುವದು ಅನಿವಾರ್ಯವಾಗಿದೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಕೊಡಗು ಶಾಖೆ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಕುಮಾರ್ ಅವರು ಮಾತನಾಡಿ ಶೇ. 3ಕ್ಕೂ ಹಚ್ಚಿನ ವಿಶೇಷಚೇತನರು ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿದ್ದು ಇಂತಹವರ ಸಮಗ್ರ ಆರೈಕೆ, ಬೆಂಬಲ ಮತ್ತು ಚಿಕಿತ್ಸೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯು ‘ವಿಶೇಷಚೇತನರಿಗಾಗಿ ಸಮಗ್ರ ಆರೈಕೆ, ಬೆಂಬಲ ಮತ್ತು ಚಿಕಿತ್ಸೆ’ ಯೊಜನೆ ಜಾರಿಗೆ ತಂದಿದೆ ಎಂದು ವಿವರಿಸಿದರು.
ಜಿಲ್ಲಾ ವಿಶೇಷಚೇತನರ ಸಂಘದ ಅಧ್ಯಕ್ಷರಾದ ಮಹೇಶ್ವರ ಜೆ.ಎಂ., ಜಿಲ್ಲಾ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಬಿ.ಪಿ.ದೇವರಾಜು, ವಿಶೇಷ ಚೇತನ ಮಕ್ಕಳ ಶಾಲೆಯ ಮುಖ್ಯಸ್ಥರು, ಮಕ್ಕಳು, ಪೋಷಕರು ಇತರರು ಇದ್ದರು.
ವಿವಿಧ ಕ್ರೀಡಾ ಮತ್ತು ಸಾಂಸ್ಕøತಿಕ ಚಟುವಟಿಕೆಯಲ್ಲಿ ಭಾಗವಹಿಸಿ ವಿಜೇತರಾದ ವಿಶೇಷಚೇತನರಿಗೆ ಬಹುಮಾನ ವಿತರಿಸಲಾಯಿತು. ವಿಶೇಷ ಚೇತನ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಜಿಲ್ಲಾ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಬಿ.ಪಿ. ದೇವರಾಜು ಸ್ವಾಗತಿಸಿ, ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ನಿರೂಪಿಸಿದರು.