ಮಡಿಕೇರಿ, ಡಿ. 3: ಶಿಕ್ಷಕರಲ್ಲಿ ಇರುವಂತಹ ಪ್ರವೃತ್ತಿಯನ್ನು ಅನಾವರಣಗೊಳಿಸಲು ಸಹಪಠ್ಯ ಚಟುವಟಿಕೆ ಸ್ಪರ್ಧಾ ಕಾರ್ಯಕ್ರಮವು ಉತ್ತಮ ವೇದಿಕೆಯನ್ನು ಒದಗಿಸಿಕೊಟ್ಟಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಕಾಶೀನಾಥ್ ತಿಳಿಸಿದರು.

ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಹಾಗೂ ಕೊಡಗು ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರಲ್ಲಿ ಇರುವಂತಹ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಒದಗಿಸಿಕೊಟ್ಟಿರುವದು ಸಂತಸ ತಂದಿದೆ. ಶಿಕ್ಷಕರು ತಮ್ಮಲ್ಲಿರುವ ಉತ್ತಮ ಪ್ರತಿಭೆಯನ್ನು ಮಕ್ಕಳಿಗೆ ಕಲಿಸಿ ಕೊಡುವ ಮೂಲಕ ಮಕ್ಕಳಲ್ಲಿ ಉತ್ತಮ ಪ್ರವೃತ್ತಿಯನ್ನು ಬೆಳೆಸಲು ಮುಂದಾಗಬೇಕೆಂದು ಶಿಕ್ಷಕರಿಗೆ ತಿಳಿಸಿದರು.

ನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ದೇವಮ್ಮ ಅವರು ಮಾತನಾಡಿ ತಾಲೂಕು ಮಟ್ಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತಾ ಜಿಲ್ಲೆಯ ಶಿಕ್ಷಕರಲ್ಲಿ ಇರುವಂತಹ ಪ್ರತಿಭೆಯು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅನಾವರಣಗೊಳ್ಳಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಹಾಕತ್ತೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ರಾಮಚಂದ್ರ, ದೈಹಿಕ ಶಿಕ್ಷಣ ಅಧೀಕ್ಷಕರಾದ ವೆಂಕಟೇಶ್, ಕಾರ್ಯಕ್ರಮದ ನೋಡೆಲ್ ಅಧಿಕಾರಿ ಕಾತ್ಯಾಯಿನಿ, ಶಿಕ್ಷಣ ಸಂಯೋಜಕ ಹರೀಶ್ ಇತರರು ಇದ್ದರು.