ಒಡೆಯನಪುರ, ಡಿ. 3: ಸಮೀಪದ ಆಲೂರುಸಿದ್ದಾಪುರ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯ 12 ಮಂದಿ ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರದಲ್ಲಿ ಸಾಯಿ ಸೆಂಟರ್ ಫಾರ್ ಪರ್‍ಫಾರ್ಮಿಂಗ್ ಆಟ್ರ್ಸ್ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಟ್ಟದ ಅಖಿಲ ಭಾರತ ನೃತ್ಯೋತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ನೃತ್ಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದಲ್ಲಿ ಗುರುತಿಸಿ ಪ್ರಶಸ್ತಿ ಪಡೆದುಕೊಂಡ ಸಾಧಕ ವಿದ್ಯಾರ್ಥಿಗಳಿಗಾಗಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕುಶಾಲನಗರದ ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆಯ ವಿಧೂಷಕಿ ಹಾಗೂ ರಾಷ್ಟ್ರೀಯ ಮಟ್ಟದ ‘ರಾಷ್ಟ್ರೀಯ ಭೋಗ ನಂದೀಶ್ವರ’ ಬಿರುದಿಗೆ ಪಾತ್ರರಾದ ಏಂಜಲ್ ರಶ್ಮಿ ಡಿಸೋಜ-ನಮ್ಮ ದೇಶ ಸಾಂಸ್ಕøತಿಕವಾಗಿ ಶ್ರೀಮಂತವಾಗಿದೆ ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆ ಶಾಸ್ತ್ರೀಯ ನೃತ್ಯಕ್ಕೆ ಸಂಬಂದಿಸಿದ ಭರತನಾಟ್ಯ ನೃತ್ಯ ಪ್ರಕಾರಗಳು, ಪಾಶ್ಚಿಮಾತ್ಯ ನೃತ್ಯ, ಸ್ಕೇಟಿಂಗ್ ಸೇರಿದಂತೆ ವೈವಿಧ್ಯತೆಗಳನ್ನು, ಪ್ರಕಾರಗಳನ್ನು ಹೇಳಿಕೊಡಲಾಗುತ್ತಿದೆ ಎಂದರು. ಕಳೆದ 5 ವರ್ಷಗಳಿಂದ ನೃತ್ಯ ಶಾಲೆಯಲ್ಲಿ ಕಲಿತ ಸಾವಿರಾರು ಸಾಂಸ್ಕøತಿಕ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ, ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಅಖಿಲ ಭಾರತ ನೃತ್ಯೋತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ರಾಷ್ಟ್ರದಿಂದ 175 ತಂಡಗಳು ಭಾಗವಹಿಸಿದ್ದವು, ಇದರಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿನಿಧಿಸಿದ್ದರು ಈ ಪೈಕಿ ಆಲೂರುಸಿದ್ದಾಪುರ ಜಾನಕಿ ಕಾಳಪ್ಪ ವಿದ್ಯಾಸಂಸ್ಥೆಯಿಂದ ಹಲವಾರು ವಿದ್ಯಾರ್ಥಿಗಳು ಸಹ ಸ್ಪರ್ಧೆಯಲ್ಲಿ ಪ್ರತಿನಿಧಿಸಿದ್ದರು, ಇದರಲ್ಲಿ ಈ ಶಾಲೆಯ 12 ಮಂದಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡು ಸಂಸ್ಥೆಗೆ ಹೆಸರು ತಂದುಕೊಟ್ಟಿದ್ದಾರೆ. ಈ ಶಾಲೆಯ ತಂಡ 26 ರಾಷ್ಟ್ರೀಯ ನಾಟ್ಯ ಕಲಾ ನಂದಿ’ ಎಂಬ ಬಿರುದನ್ನು ಪಡೆದುಕೊಂಡಿರುವದು ಹೆಮ್ಮೆಯ ವಿಷಯವಾಗಿದೆ ಎಂದರು. ವಿದ್ಯಾರ್ಥಿಗಳು ಪಠ್ಯದ ಜೊತೆಯಲ್ಲಿ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಂಸ್ಕøತಿಕ ಕ್ಷೇತ್ರವನ್ನು ಮುನ್ನಡೆಸಬೇಕು, ಈ ದಿಸೆಯಲ್ಲಿ ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳ ಸಾಂಸ್ಕøತಿಕ ಪ್ರತಿಭೆಗಳನ್ನು ಗುರುತಿಸಬೇಕಾಗಿದೆ, ಈ ನಿಟ್ಟಿನಲ್ಲಿ ಜಾನಕಿ ಕಾಳಪ್ಪ ವಿದ್ಯಾಸಂಸ್ಥೆ ವಿದ್ಯಾರ್ಥಿಗಳನ್ನು ಸಾಂಸ್ಕøತಿಕವಾಗಿ ಬೆಳೆಸುತ್ತಿರುವದು ಶ್ಲಾಘನೀಯ ಎಂದರು.

ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆಯ ಮುಖ್ಯಸ್ಥ ಅರ್ಪಿತ್ ಅನೂಪ್ ಡಿಸೋಜ ಮಾತನಾಡಿ-ಈ ಹಿಂದೆ ನೃತ್ಯ ನಾಟ್ಯ, ಪಾಶ್ಚಿಮಾತ್ಯ ನೃತ್ಯ, ಕರಾಟೆ, ಸ್ಕೇಟಿಂಗ್ ಮುಂತಾದ ಪ್ರಕಾರಗಳು ಕೇವಲ ನಗರ ಪಟ್ಟಣಗಳಿಗೆ ಮಾತ್ರ ಮೀಸಲಾಗಿತ್ತು. ಇದೀಗ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಹ ಇಂತಹ ಸಾಂಸ್ಕøತಿಕ ಕ್ಷೇತ್ರದಲ್ಲಿ ಪ್ರತಿಭೆಗಳನ್ನು ಬೆಳಗಿಸಿ ರಾಷ್ಟ್ರ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ, ಇದಕ್ಕೆ ಆಲೂರುಸಿದ್ದಾಪುರ ಜಾನಕಿ ಕಾಳಪ್ಪ ಶಾಲೆಯ ವಿದ್ಯಾರ್ಥಿಗಳ ತಂಡ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದುಕೊಂಡಿರುವದೆ ಸಾಕ್ಷಿಯಾಗಿದೆ ಎಂದರು.

ವಿದ್ಯಾಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಎಚ್.ಕೆ. ಶಿವಪ್ರಕಾಶ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಠ್ಯ ವಿಷಯದ ಜೊತೆಯಲ್ಲಿ ಆತ್ಮಸ್ಥೈರ್ಯಯನ್ನು ಬೆಳೆಸಿಕೊಳ್ಳಬೇಕೆಂಬ ಉದ್ದೇಶದಿಂದ ಸಾಂಸ್ಕøತಿಕ ಚಟುವಟಿಕೆ, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದೆ, ಈ ನಿಟ್ಟಿನಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ನೃತ್ಯ ನಾಟ್ಯ, ಕರಾಟೆ ಮುಂತಾದ ತರಬೇತಿಯನ್ನು ಹೇಳಿಕೊಡಲಾಗುತ್ತಿದೆ ಹಾಗೂ ಮುಂದಿನ ದಿನದಲ್ಲಿ ನಮ್ಮ ವಿದ್ಯಾಸಂಸ್ಥೆ ವತಿಯಿಂದ ಗ್ರಾಮೀಣ ಸೊಗಡು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವದು ಎಂದರು. ವಿದ್ಯಾಸಂಸ್ಥೆಯ ಸರ್ವಾಂಗೀಣ ಪ್ರಗತಿಗೆ ಪೋಷಕರು, ಶಿಕ್ಷಕರು ಸಹಕರಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಸರಿತಾ ಶಿವಪ್ರಕಾಶ್, ಮುಖ್ಯ ಶಿಕ್ಷಕ ಧನಂಜಯ್ ಮುಂತಾದವರು ಹಾಜರಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಶಾಲೆಯ 12 ಮಂದಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು. -ವಿ.ಸಿ.ಸುರೇಶ್ ಒಡೆಯನಪುರ