ಮಡಿಕೇರಿ, ಡಿ. 3 : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಕೊಳ್ಳಲಿರುವ ಮೈಸೂರು- ಮಡಿಕೇರಿ ಚತುಷ್ಪಥ ಯೋಜನೆ ಕೊಡಗಿಗೆ ಮಾರಕವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ, ಈ ಯೋಜನೆಯನ್ನು ವಿರೋಧಿಸಿ ತಾ.8ರಂದು ಮಡಿಕೇರಿಯಲ್ಲಿ ಬೃಹತ್ ರ್ಯಾಲಿ ನಡೆಸುವದಾಗಿ ಘೋಷಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಅಧ್ಯಕ್ಷ ಕರ್ನಲ್ ಸಿ.ಪಿ. ಮುತ್ತಣ್ಣ ಹಾಗೂ ವೇದಿಕೆಯ ಅಧ್ಯಕ್ಷ ರಾಜೀವ್ ಬೋಪಯ್ಯ ಅವರುಗಳು, ಕೊಡಗಿನ ಮೂಲಕ ಚತುಷ್ಪಥ ರಸ್ತೆ ಹಾದು ಹೋಗುವದರಿಂದ ಜಿಲ್ಲೆಯ ಅಭಿವೃದ್ಧಿಯಾಗುವದಿಲ್ಲ, ಬದಲಿಗೆ ಕೊಡಗಿನ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಯೋಜನೆ ಗಾಗಿ 10 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡ ಲಾಗುವದು ಎಂದು ಹೇಳಲಾಗುತ್ತಿದೆ, ಇಷ್ಟು ಹಣವಿದ್ದರೆ ಮಲೆನಾಡು ಪ್ರದೇಶಗಳ ಅಭಿವೃದ್ಧಿ ಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.ಪ್ರಕೃತಿ ವಿಕೋಪದಿಂದ ಸಂತ್ರಸ್ತರಾ ದವರಿಗೆ ಪುನರ್ವಸತಿ ಕಲ್ಪಿಸಲು ಒಂದು ಸಾವಿರ ಕೋಟಿ ವೆಚ್ಚ ಮಾಡಲು ಸಿದ್ಧವಿಲ್ಲದ ಸರಕಾರಗಳು, ಕೊಡಗಿನ ವಿನಾಶಕ್ಕಾಗಿ ಹತ್ತಾರು ಸಾವಿರ ಕೋಟಿ ವೆಚ್ಚ ಮಾಡಲು ಹವಣಿಸುತ್ತಿವೆ ಎಂದು ಆರೋಪಿಸಿದರು.

ಕೊಡಗು ಪುಟ್ಟ ಜಿಲ್ಲೆಯಾಗಿದ್ದು, ಇಲ್ಲಿನ ಅಭಿವೃದ್ಧಿಗೆ ರೈಲ್ವೆ ಅಥವಾ ಚತುಷ್ಪಥ

(ಮೊದಲ ಪುಟದಿಂದ) ರಸ್ತೆಯಂತಹ ಬೃಹತ್ ಯೋಜನೆಗಳ ಅಗತ್ಯವಿಲ್ಲ ಎಂದು ಹೇಳಿದರು.

ಈ ನಿಟ್ಟನಲ್ಲಿ ತಾ.8ರಂದು ಮಡಿಕೇರಿಯಲ್ಲಿ ಬೃಹತ್ ರ್ಯಾಲಿ ಆಯೋಜಿಸುವ ಮೂಲಕ ಸರಕಾರದ ಗಮನ ಸೆಳೆಯಲಾಗುವದು ಎಂದರು.

ಕೊಡಗಿಗೆ ರೈಲು, ಚತುಷ್ಪಥ ರಸ್ತೆಗಳಿಗಿಂತ ಇನ್ನೂ ರಸ್ತೆಗಳನ್ನೇ ಕಾಣದ ಗ್ರಾಮಗಳಿಗೆ ರಸ್ತೆ, ವಿದ್ಯುತ್ ಇಲ್ಲದ ಪ್ರದೇಶಗಳಿಗೆ ವಿದ್ಯುತ್, ಕುಡಿಯುವ ನೀರಿನ ಸೌಲಭ್ಯದಂತಹ ಯೋಜನೆಗಳಿಗೆ ಒತ್ತು ನೀಡುವ ಎಂದು ಮುತ್ತಣ್ಣ ಹಾಗೂ ರಾಜೀವ್ ಬೋಪಯ್ಯ ಆಗ್ರಹಿಸಿದರು.

ಕಾವೇರಿ ಸೇನೆಯ ಸಂಚಾಲಕ ರವಿ ಚಂಗಪ್ಪ ಮಾತನಾಡಿ, ರೈಲ್ವೆ ಹಾಗೂ ಚತುಷ್ಪಥ ಮಾರ್ಗದ ವಿರುದ್ಧವಾಗಿ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, ಇನ್ನು ಒಂದು ತಿಂಗಳಲ್ಲಿ ಈ ಬಗ್ಗೆ ಆದೇಶ ಹೊರಬೀಳುವ ನಿರೀಕ್ಷೆಯಿದೆ ಎಂದರು.

ಕೊಡಗಿನ ವಿನಾಶದ ವಿರುದ್ಧ ಧ್ವನಿ ಎತ್ತುವದಕ್ಕಾಗಿ ತಾ.8ರಂದು ಗಾಂಧಿ ಮೈದಾನದಲ್ಲಿ ರ್ಯಾಲಿ ಆಯೋಜಿಸಲಾಗಿದ್ದು, ಅಂದು ಪೂರ್ವಾಹ್ನ 10 ಗಂಟೆಗೆ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಿಂದ ಗಾಂಧಿ ಮೈದಾನದವರೆಗೆ ಮೆರವಣಿಗೆ ನಡೆಯಲಿದೆ. ಮುಖ್ಯಮಂತ್ರಿಯವರ ಕಾರ್ಯಕ್ರಮ ನಿಗದಿಯಾದಲ್ಲಿ ಗಾಂಧಿ ಮೈದಾನಕ್ಕೆ ಬದಲು ಜಿಲ್ಲಾ ಕ್ರೀಡಾಂಗಣದಲ್ಲೇ ಸಭೆ ನಡೆಸಿ, ನಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ರಾಯ್ ಬೋಪಣ್ಣ ಉಪಸ್ಥಿತರಿದ್ದರು.