ಮಡಿಕೇರಿ, ಡಿ. 3: ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಿದ ಘಟನೆಯನ್ನು ಖಂಡಿಸಿ ತಾ.6 ರಂದು ನಗರದ ಇಂದಿರಾಗಾಂಧಿ ವೃತ್ತದಲ್ಲಿ ಕರಾಳದಿನ ಆಚರಣೆಯೊಂದಿಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿರುವದಾಗಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಟಿ.ಹೆಚ್.ಅಬೂಬಕರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ಬಾಬರಿ ಮಸೀದಿಯನ್ನು ಮರಳಿ ಪಡೆಯೋಣ ಭಾರತವನ್ನು ಮರಳಿ ಗಳಿಸೋಣ” ಎಂಬ ಘೋಷಣೆಯೊಂದಿಗೆ ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶದಾದ್ಯಂತ ಎಸ್‍ಡಿಪಿಐ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದರು.

ಬಾಬರಿ ಮಸೀದಿಯನ್ನು ಕೆಡವಿದ ಪ್ರದೇಶದಲ್ಲೆ ಮಸೀದಿ ಪುನರ್ ನಿರ್ಮಾಣ ಮಾಡಬೇಕು ಮತ್ತು ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಬರಹಾನ್ ಆಯೋಗವು ಹೆಸರಿಸಿರುವ 69 ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ಸಂದರ್ಭ ಒತ್ತಾಯಿಸಲಾಗುವದು ಎಂದು ಅವರು ಹೇಳಿದರು.

ಕಳೆದ ನಾಲ್ಕುವರೆ ವರ್ಷಗಳಿಂದ ಸುಮ್ಮನಿದ್ದ ಸಂಘ ಪರಿವಾರ ಮತ್ತು ಬಿಜೆಪಿ, ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ರಾಮ ಮಂದಿರಕ್ಕಾಗಿ ರ್ಯಾಲಿಯನ್ನು ಹಮ್ಮಿಕೊಂಡಿದೆ. ಈ ರೀತಿಯ ನಾಟಕಗಳಿಗೆ ಜನರು ಸೊಪ್ಪು ಹಾಕುದಿಲ್ಲವೆಂದು ಅವರು ತಿಳಿಸಿದರು.

ತಾ. 1 ರಂದು ಮಡಿಕೇರಿಯಲ್ಲಿ ನಡೆದ ಹಿಂದೂ ಸಂಘಟನೆಗಳ ಸಭೆಯಲ್ಲಿ ಬಜರಂಗದಳದ ರಘು ಸಕಲೇಶಪುರ ಎಂಬವರು, ಸಂತೋಷ್ ತಮ್ಮಯ್ಯ ವಿರುದ್ಧ ದೂರು ನೀಡಿದ್ದ ಅಸ್ಗರ್ ಎಂಬವರಿಗೆ ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಪ್ರಾಕೃತಿಕ ವಿಕೋಪದ ಸಂದರ್ಭ ಸೌಹಾರ್ದತೆಯಿಂದ ಒಗ್ಗಟ್ಟನ್ನು ಪ್ರದರ್ಶಿಸಿದ ಕೊಡಗು ಜಿಲ್ಲೆಯಲ್ಲಿ ಅಶಾಂತಿಯನ್ನು ಮೂಡಿಸಲು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು. ರಘುವನ್ನು ಬಂಧಿಸಬೇಕು ಮತ್ತು ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪದಡಿ ಸಂತೋಷ್ ತಮ್ಮಯ್ಯ ಅವರ ಜಾಮೀನನ್ನು ರದ್ದು ಪಡಿಸಬೇಕೆಂದು ಅಬೂಬಕರ್ ಒತ್ತಾಯಿಸಿದರು.

ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸೃಷ್ಟಿಯಾಗಲು ಮುಸಲ್ಮಾನರಿಗೆ ಮೂಲ ನಿವಾಸಿಗಳು ತಮ್ಮ ಭೂಮಿಯನ್ನು ಮಾರಾಟ ಮಾಡಿರುವದೇ ಕಾರಣವೆಂದು ಸ್ವಾಮೀಜಿಯೊಬ್ಬರು ಹೇಳಿಕೆ ನೀಡಿದ್ದು, ಸಮಾಜದಲ್ಲಿ ಒಡಕು ಮೂಡಿಸುವ ಇಂತಹ ಸ್ವಾಮೀಜಿಗಳ ಬಗ್ಗೆ ಕೊಡಗಿನ ಜನತೆ ಎಚ್ಚರದಿಂದಿರುವದು ಸೂಕ್ತವೆಂದು ಅಭಿಪ್ರಾಯಪಟ್ಟರು.

ಎಸ್‍ಡಿಪಿಐ ಮಡಿಕೇರಿ ನಗರಾಧ್ಯಕ್ಷ ಮನ್ಸೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ಕಾರ್ಯದರ್ಶಿ ಕೆ.ಎಚ್.ಇಬ್ರಾಹಿಂ ಹಾಗೂ ಸಂಶೀರ್ ಉಪಸ್ಥಿತರಿದ್ದರು.