ಮಡಿಕೇರಿ, ಡಿ. 3: ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ವಾರದಿಂದ ನಡೆಯುತ್ತಿದ್ದ ಅಶ್ವಥ್ ಐಯ್ಯಪ್ಪ ಮತ್ತು ಡಾ. ಅಖಿಲ್ ಕುಟ್ಟಪ್ಪ ಕ್ರಿಕೆಟ್ ಟ್ರೋಫಿ ಮುಕ್ತಾಯಗೊಂಡಿದ್ದು, ಕೊಡಗು ವಿದ್ಯಾಲಯ ಭಾರತೀಯ ವಿದ್ಯಾಭವನ ಶಾಲೆಯು ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಕಾಲ್ಸ್ ವಿರುದ್ಧ ಕೊಡಗು ವಿದ್ಯಾಲಯ 8 ವಿಕೆಟ್‍ಗಳ ಗೆಲವು ಸಾಧಿಸಿದೆ.ಮುಕ್ತಾಯ ಸಮಾರಂಭದಲ್ಲಿ ಟ್ರೋಫಿ ವಿತರಿಸಿ ಮಾತನಾಡಿದ ಕೊಡಗು ವಿದ್ಯಾಲಯದ ಅಧ್ಯಕ್ಷ ಬಿ.ಕೆ. ಸುಬ್ಬಯ್ಯ ಅವರು ಯಶಸ್ವೀ ಕ್ರಿಕೆಟಿಗ ರಾಗಲು ಸೂತ್ರಗಳನ್ನು ಹೇಳಿದರು. ಸಮರ್ಪಣಾ ಭಾವ ಮತ್ತು ಏಕಾಗ್ರತೆ, ನಿರಂತರ ಅಭ್ಯಾಸ, ಆಟ ಕೆಟ್ಟರೂ ಅಂಪೆಯರ್ ಜೊತೆ ಗೌರವಯುತ ವರ್ತನೆ, ಉತ್ತಮ ಆಟಗಾರರ ಆದರ್ಶ ಪಾಲಿಸುವಿಕೆ ಯಿಂದ ಯಶಸ್ವೀ ಕ್ರೀಡಾಪಟುಗಳಾಗಬಹು ದೆಂದು ಹೇಳಿದರು.ಕ್ರಿಕೆಟ್ ದೇವರು ಎಂದು ಕರೆಸಿ ಕೊಂಡ ಸಚಿನ್ ತೆಂಡೂಲ್ಕರ್ ಪಂದ್ಯಾಟ ಗಳಿದ್ದಾಗ ನಡು ರಾತ್ರಿಯೂ ಕನ್ನಡಿಯ ಎದುರು ನಿಂತು ಆಟದ ಭಂಗಿಗಳ ಅಭ್ಯಾಸ ನಡೆಸುತ್ತಿದ್ದುದನ್ನು ಸ್ಮರಿಸಿದರು. ಕೊಡಗಿನ ಕ್ರೀಡಾಪಟು ಗಳಿಗೆ ಮ್ಯಾನ್ಸ್ ಕಾಂಪೌಂಡ್ ಮೆಕ್ಕಾ ಇದ್ದಂತೆ ಎಂದರು.
ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಯಂ.ಸಿ. ನಾಣಯ್ಯ ಅಶ್ವಥ್ ಐಯ್ಯಪ್ಪ ಅವರ ‘ವೆನ್‍ಗಾಡ್ ಬೌಲ್ಸ್ ಗೂಗ್ಲಿ’ ಪುಸ್ತಕ ಓದಿದರೆ ಅವರಿಗೆ ಆಧ್ಯಾತ್ಮದ ಅಪರೋಕ್ಷ ಜ್ಞಾನ ಇದ್ದ ಅನುಭವವಾಗುತ್ತದೆ ಎಂದರು.
(ಮೊದಲ ಪುಟದಿಂದ) ಕ್ರೀಡಾಂಗಣದಲ್ಲಿ ಜಿಲ್ಲಾ ಆಡಳಿತ ಕಟ್ಟಡ ಒಂದನ್ನು ನಿರ್ಮಾಣ ಮಾಡಲು ಮುಂದಾದಾಗ ತಾನು ಅದನ್ನು ತಡೆಹಿಡಿದ ಬಗ್ಗೆ ನಾಣಯ್ಯ ಹೇಳಿದರು. ಯಾವದೇ ಮೈದಾನಗಳಲ್ಲೂ ಕಟ್ಟಡಗಳನ್ನು ಕಟ್ಟದಂತೆ ಎಚ್ಚರಿಸಿದ ಅವರು, ಕ್ರೀಡಾಭಿಮಾನಿಗಳು ಮೈದಾನಗಳನ್ನು ರಕ್ಷಿಸಬೇಕೆಂದರು.
ಕೊಡಗು ವಿದ್ಯಾಲಯದ ಉಪಾಧ್ಯಕ್ಷ ಕೆ.ಪಿ. ಉತ್ತಪ್ಪ ಅವರು ಮಾತನಾಡಿ, ಕ್ರೀಡಾಪಟುಗಳು ಅಶ್ವಥ್ ಐಯ್ಯಪ್ಪ ಬರೆದಿರುವ ಪುಸ್ತಕವನ್ನು ಓದುವಂತೆ ಸೂಚಿಸಿದರು. ಕೊಡಗು ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್ ಮಾತನಾಡಿ, ಅಗಲಿದ ಅಶ್ವಥ್ ಮತ್ತು ಅಖಿಲ್ ವಿಶೇಷ ಚೇತನಗಳಾಗಿದ್ದು, ಕೋಡಿಮಣಿಯಂಡ ರಘು ಮಾದಪ್ಪ ಅವರು ಮಕ್ಕಳ ಹೆಸರಿನಲ್ಲಿ ಕ್ರೀಡೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವದು ಶ್ಲಾಘನೀಯ ಎಂದರು.
‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ, ಅಶ್ವಥ್ ಸಹೋದರರ ಹೆಸರು ಕ್ರೀಡಾಭಿಮಾನಿಗಳ ಹೃದಯಗಳಲ್ಲಿ ಮರುಹುಟ್ಟು ಪಡೆದಿದೆ ಎಂದರು. ಅಶ್ವಥ್ ಐಯ್ಯಪ್ಪ ಕ್ರೀಡೆಗೆ ಆಧ್ಯಾತ್ಮದ ದೃಷ್ಟಿ ನೀಡುವ ಯತ್ನ ಮಾಡಿದ್ದು, ಕ್ರೀಡಾಪಟುಗಳು ಮಾರ್ಗದರ್ಶಕರ ಮೂಲಕ ಆಧ್ಯಾತ್ಮಕ ದೃಷ್ಟಿಕೋನವನ್ನೂ ಅಳವಡಿಸಿಕೊಳ್ಳುವ ಯತ್ನ ಮಾಡ ಬೇಕೆಂದರು.
ಕ್ರಿಕೆಟ್ ಪಂದ್ಯಾಟವನ್ನು ರಘು ಮಾದಪ್ಪ ಅವರು ಶಂಕರ್ ಕ್ರಿಕೆಟ್ ಅಕಾಡೆಮಿಯ ಮೂಲಕ ಆಯೋಜಿಸಿದರು. ವೇದಿಕೆಯಲ್ಲಿ ಶಾಂತಿ ಶಂಕರ್, ಡಾಲಿ ದೇವಯ್ಯ, ಕೆ.ವಿ.ಬಿ.ವಿ.ಬಿ.ಯ ವಿದ್ಯಾ ಹರೀಶ್, ರೇಖಾ ಕಾಳಯ್ಯ ಉಪಸ್ಥಿತರಿದ್ದರು.
ಚಿತ್ರಾ ಹರೀಶ್ ಪ್ರಾರ್ಥನೆ, ರೇಖಾ ನಿರೂಪಣೆ ಮಾಡಿದರು.