ಸೋಮವಾರಪೇಟೆ, ಡಿ. 3: ಕರ್ನಾಟಕದ ಪ್ರತಿಷ್ಠಿತ ಸಂಘಗಳಲ್ಲಿ ಒಂದಾಗಿರುವ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದು, ಕೊಡಗಿನಲ್ಲೂ ಆಕಾಂಕ್ಷಿಗಳು ಅಖಾಡಕ್ಕಿಳಿಯಲು ಸಜ್ಜುಗೊಳ್ಳುತ್ತಿದ್ದಾರೆ.

2019ರ ಜನವರಿಯಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದ್ದು, ಈಗಾಗಲೇ ಸದಸ್ಯತ್ವ ನೋಂದಣಿ ಮುಕ್ತಾಯಗೊಂಡಿದೆ. ಕಳೆದ ಸಾಲಿನ ಚುನಾವಣೆಯಲ್ಲಿ ಹಾಸನದಲ್ಲಿ ಪೈಂಟ್ ಮಳಿಗೆ ಇಟ್ಟುಕೊಂಡಿರುವ, ಸೋಮವಾರಪೇಟೆ ಸಮೀಪದ ಹೊನವಳ್ಳಿಯ ನಂಟು ಹೊಂದಿರುವ ಹೆಚ್.ಕೆ. ಶೇಖರ್ ಅವರು ಜಯಗಳಿಸಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದರು.

ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಘಟಾನುಘಟಿಗಳ ನಡುವೆ ಶೇಖರ್ ಅವರು ಜಯ ಸಾಧಿಸುವ ಮೂಲಕ ಹಲವರ ಹುಬ್ಬೇರಿಸಿದ್ದರು. ಅರಕಲಗೂಡಿನ ಶಾಸಕರಾಗಿದ್ದ ಎ. ಮಂಜು ಸೇರಿದಂತೆ ಸೋಮವಾರಪೇಟೆ ಹರಪಳ್ಳಿಯ ಕೃಷಿಕ, ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಹೆಚ್.ಎನ್. ರವೀಂದ್ರ, ಹೈಕೋರ್ಟ್ ವಕೀಲ ಸಂದೀಪ್ ಅವರುಗಳು ಸ್ಪರ್ಧೆಯಲ್ಲಿದ್ದರು. ಅಂತಿಮವಾಗಿ ಶೇಖರ್ ಅವರು ಜಯಗಳಿಸುವ ಮೂಲಕ ಕೊಡಗು ಜಿಲ್ಲೆಯನ್ನು ರಾಜ್ಯದಲ್ಲಿ ಪ್ರತಿನಿಧಿಸಿದ್ದರು.

ಇದೀಗ ಆಡಳಿತ ಮಂಡಳಿಯ ಅವಧಿ ಪೂರ್ಣಗೊಳ್ಳುವ ಮುಂಚೆಯೇ ಆಡಳಿತಾಧಿಕಾರಿಯ ನೇಮಕವಾಗಿದ್ದು, ನೂತನ ಆಡಳಿತ ಮಂಡಳಿ ರಚನೆಯಾಗಬೇಕಿದೆ. ಕೊಡಗಿನಲ್ಲಿ ಗೌಡ ಸಮುದಾಯ ಬಾಂಧವರು ಅಧಿಕ ಸಂಖ್ಯೆಯಲ್ಲಿದ್ದು, ಉತ್ತರ ಕೊಡಗಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದಲ್ಲಿ 16 ಸಾವಿರ ಮಂದಿ ಸದಸ್ಯತ್ವ ಪಡೆದಿದ್ದು, ಚುನಾವಣೆಯಲ್ಲಿ ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ.

ಉಚಿತ ಸದಸ್ಯತ್ವ: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ಸಾವಿರಾರು ಸಂಖ್ಯೆಯಲ್ಲಿ ಉಚಿತ ಸದಸ್ಯತ್ವ ಮಾಡಿದ್ದಾರೆ. ಸಂಘದ ಸದಸ್ಯತ್ವಕ್ಕೆ 1 ಸಾವಿರ ಶುಲ್ಕವಿದ್ದು, ತಾವುಗಳೇ ಶುಲ್ಕ ಪಾವತಿಸಿ ಸದಸ್ಯತ್ವ ಮಾಡಿಸುವ ಮೂಲಕ ಅಖಾಡಕ್ಕೆ ಇಳಿದಿದ್ದಾರೆ.

ಕಳೆದ ಸಾಲಿನ ಚುನಾವಣೆವರೆಗೂ ರಾಜ್ಯ ಸಂಘದ ಚುನಾವಣೆ ನಡೆಯುವದೇ ತಿಳಿಯುತ್ತಿರಲಿಲ್ಲ. ಆದರೆ ಶೇಖರ್ ಮತ್ತು ಎ. ಮಂಜು ಅವರ ಎಂಟ್ರಿಯಿಂದಾಗಿ ಒಕ್ಕಲಿಗರ ಸಂಘದ ಚುನಾವಣೆ ಕೊಡಗಿನಲ್ಲೂ ಹವಾ ಎಬ್ಬಿಸಿತ್ತು. ಯಾವ ವಿಧಾನ ಸಭಾ ಚುನಾವಣೆಗೂ ಕಡಿಮೆ ಇಲ್ಲ ಎಂಬಷ್ಟರ ಮಟ್ಟಿಗೆ ಚುನಾವಣಾ ಅಖಾಡ ಬಿಸಿಯೇರಿತ್ತು.

ಜನವರಿಯಲ್ಲಿ ಚುನಾವಣೆ ಸಾಧ್ಯತೆ: ಪ್ರಸ್ತುತ ಆಡಳಿತ ಮಂಡಳಿಯ ಕಾರ್ಯವೈಖರಿ ಸಮರ್ಪಕವಾಗಿಲ್ಲದ ಹಿನ್ನೆಲೆ ರಾಜ್ಯ ಒಕ್ಕಲಿಗರ ಸಂಘದ ವ್ಯವಹಾರಗಳನ್ನು ನೋಡಿಕೊಳ್ಳಲು ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿದೆ. ಕಳೆದ 2013ರಲ್ಲಿ ನಡೆದ ಚುನಾವಣೆಯಲ್ಲಿ ಜಯಗಳಿಸಿದ ನಿರ್ದೇಶಕರ ಅವಧಿ 2019 ಜನವರಿ 5ರವರೆಗೆ ಇದ್ದರೂ ಸಹ, ಸರ್ಕಾರ ಆಡಳಿತ ಮಂಡಳಿಯನ್ನು ಬದಿಯಲ್ಲಿಟ್ಟು, ಆಡಳಿತಾಧಿಕಾರಿಯನ್ನು ನೇಮಿಸಿದೆ. ಮುಂದಿನ ಜನವರಿ ತಿಂಗಳಿನಲ್ಲಿಯೇ ನೂತನ ಆಡಳಿತ ಮಂಡಳಿಯ ಚುನಾವಣೆ ನಡೆಯುವ ಸಾಧ್ಯತೆ ಇರುವ ಹಿನ್ನೆಲೆ ಅಭ್ಯರ್ಥಿಗಳು ತಮ್ಮದೇ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಕಳೆದ ಸಾಲಿನ ಚುನಾವಣೆಯಲ್ಲಿ ಜಯಗಳಿಸಿದ್ದ ಶೇಖರ್ ಅವರು ಈ ಬಾರಿಯೂ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಲಭಿಸಿಲ್ಲ. ‘ಈಗಲೇ ಯಾವದನ್ನೂ ನಿರ್ಧರಿಸಿಲ್ಲ. ಕಳೆದ ಬಾರಿ ನಮ್ಮೊಂದಿಗೆ ಕೆಲಸ ಮಾಡಿದ ಬೆಂಬಲಿಗರ ಅಭಿಪ್ರಾಯ ಪಡೆದು ನಂತರ ತೀರ್ಮಾನ ಮಾಡುತ್ತೇನೆ’ ಎಂದು ಶೇಖರ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.

ಈರ್ವರ ನಡುವೆ ಸ್ಪರ್ಧೆ ಸಾಧ್ಯತೆ: ಪ್ರಸಕ್ತ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಿಂದ ನಿರ್ದೇಶಕ ಸ್ಥಾನಕ್ಕೆ ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಮತ್ತು ಉದ್ಯಮಿ ಹಾಗೂ ದಾನಿಗಳಾಗಿರುವ ಹರಪಳ್ಳಿ ರವೀಂದ್ರ ಅವರ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.

ಹರಪಳ್ಳಿ ರವೀಂದ್ರ ಅವರು ಕಳೆದ ಸಾಲಿನ ಚುನಾವಣೆಯಲ್ಲಿ, ಅಂತಿಮ ಕ್ಷಣದಲ್ಲಿ ಚುನಾವಣಾ ಅಖಾಡಕ್ಕಿಳಿದು ಸೋಲನುಭವಿಸಿದ್ದು, ಈ ಬಾರಿ ಭರ್ಜರಿ ತಯಾರಿಯೊಂದಿಗೆ ಸಿದ್ಧತೆ ಕೈಗೊಂಡಿದ್ದಾರೆ. ಸೋಮವಾರಪೇಟೆ ಭಾಗದ ಎರಡು ಕೆರೆಗಳನ್ನು ತಮ್ಮ ಸ್ವಂತ ಖರ್ಚಿನ ಮೂಲಕ ಹೂಳೆತ್ತಿಸಿದ್ದು, ಹಲವಷ್ಟು ದೇವಾಲಯ, ಯುವಕ ಸಂಘಗಳಿಗೂ ಸಹಕಾರ ನೀಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಟ್ಟದಳ್ಳಿಯಲ್ಲಿರುವ ಶಾಲೆಗಳ ಅಭಿವೃದ್ಧಿಗೆ ಕೊಡುಗೆ ನೀಡಿದ್ದು, ಪ್ರತಿವರ್ಷ ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಎ.ಆರ್. ಮುತ್ತಣ್ಣ ಅವರು ಸೋಮವಾರಪೇಟೆಯಲ್ಲಿ ಒಕ್ಕಲಿಗರ ಸಂಘವನ್ನು ಬಲಿಷ್ಠವಾಗಿ ಕಟ್ಟಿದ್ದು, ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇದರೊಂದಿಗೆ ಶಾಲೆ, ಕಾಲೇಜು ನಿರ್ಮಾಣದಲ್ಲೂ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಸುವರ್ಣ ಮಹೋತ್ಸವ ಭವನ ನಿರ್ಮಾಣ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಎ.ಆರ್. ಮುತ್ತಣ್ಣ ಅವರು, ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸುವ ಮನಸ್ಸು ಹೊಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅವಿರೋಧ ಆಯ್ಕೆಗೆ ಪ್ರಯತ್ನ: ಚುನಾವಣೆ ಬದಲಿಗೆ ಜಿಲ್ಲೆಯಿಂದ ಅವಿರೋಧವಾಗಿ ನಿರ್ದೇಶಕರನ್ನು ಆಯ್ಕೆ ಮಾಡಲು ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ಪ್ರಯತ್ನ ನಡೆಸುತ್ತಿದೆ. ಡಿ. 8 ರಂದು ಅಪರಾಹ್ನ 12 ಗಂಟೆಗೆ ಸೋಮವಾರಪೇಟೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಜಿಲ್ಲಾ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ ತಿಳಿಸಿದ್ದಾರೆ. ಒಟ್ಟಾರೆ ಎ.ಆರ್. ಮುತ್ತಣ್ಣ ಮತ್ತು ಹರಪಳ್ಳಿ ರವೀಂದ್ರ ಅವರುಗಳ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿದ್ದು, ಎ. ಮಂಜು ಅವರು ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸದಿದ್ದರೆ, ಅವರೂ ಸಹ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ. ಇವರೊಂದಿಗೆ ಹೆಚ್.ಕೆ. ಶೇಖರ್ ಅವರೂ ಕಣಕ್ಕಿಳಿಯುವ ಸಂಭವವನ್ನು ತಳ್ಳಿಹಾಕುವಂತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

- ವಿಜಯ್ ಹಾನಗಲ್