ಮಡಿಕೇರಿ, ಡಿ. 3: ಸಿದ್ದಾಪುರದ ಗುಹ್ಯ ಗ್ರಾಮದ ಕಕ್ಕಟ್ಟುಕಾಡುವಿನ ರಸ್ತೆ ವಿಚಾರದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಕೊಡಗಿಗೆ ಭೇಟಿ ನೀಡುವ ತಾ. 8 ರಂದು ಸಂಘಸಂಸ್ಥೆಗಳ ಸಹಕಾರದೊಂದಿಗೆ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥ ರೆಜಿತ್‍ಕುಮಾರ್ ಮಾತನಾಡಿ, ಪ್ರತಿಭಟನೆ ಮುಖ್ಯ ಮಂತ್ರಿಗಳ ಕಾರ್ಯಕ್ರಮಕ್ಕೆ ತಡೆಯನ್ನುಂಟು ಮಾಡುವ ಉದ್ದೇಶವನ್ನು ಹೊಂದಿಲ್ಲ. ಗ್ರಾಮಸ್ಥರು ಹಲವಾರು ವರ್ಷಗಳಿಂದ ಎದುರಿಸಿಕೊಂಡು ಬರುತ್ತಿರುವ ದಾರಿಯ ಸಮಸ್ಯೆಗೆ ತಾರ್ಕಿಕ ಅಂತ್ಯವನ್ನು ಕಂಡುಕೊಳ್ಳುವ ಉದ್ದೇಶವನ್ನಷ್ಟೇ ಹೊಂದಿರುವದಾಗಿ ಸ್ಪಷ್ಟಪಡಿಸಿದರು.
ಹಲವಾರು ಪ್ರತಿಭಟನೆಗಳನ್ನು ನಡೆಸಿದ್ದರೂ ಜಿಲ್ಲಾಡಳಿತದಿಂದಾಗಲಿ, ಜನಪ್ರತಿನಿಧಿಗಳಿಂದಾಗಲಿ, ಗ್ರಾಮ ಪಂಚಾಯ್ತಿಯಿಂದಾಗಲಿ ಸಂಕಷ್ಟದ ನಿವಾರಣೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿಗಳ ಭೇಟಿಯ ಸಂದರ್ಭ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಇದಕ್ಕೂ ಸ್ಪಂದನ ದೊರಕದಿದ್ದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದರು.
ಕಕ್ಕಟ್ಟಕಾಡು ರಸ್ತೆಯ ವಿವಾದಕ್ಕೆ ಸಂಬಂಧಿಸಿದಂತೆ ವೀರಾಜಪೇಟೆ ನ್ಯಾಯಾಲಯ ಹತ್ತು ಅಡಿ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಬಾರದೆಂದು ಆದೇಶವನ್ನು ನೀಡಿದೆ. ಆದರೆ, ಕಕ್ಕಟ್ಟಕಾಡು ಗ್ರಾಮಕ್ಕೆ ತೆರಳುವ ರಸ್ತೆಯನ್ನು ಒತ್ತುವರಿ ಮಾಡಿಕೊಳ್ಳ ಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆಯಲ್ಲದೆ, ಉಪವಿಭಾಗಾಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ನಡೆಸಿ ಸರ್ವೇ ಕಾರ್ಯಕ್ಕೆ ಸೂಚನೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಸರ್ವೇ ಕಾರ್ಯ ನಡೆದಿಲ್ಲವೆಂದು ಆರೋಪಿಸಿದರು.
ಗ್ರಾಮಸ್ಥ ರಾಜೇಶ್ ಮಾತನಾಡಿ, ಗುಹ್ಯ ಅಗಸ್ತ್ಯೇಶ್ವರ ಭಕ್ತಜನ ಸಂಘದ ಕೆಲವರು ಅನಗತ್ಯ ಸುಳ್ಳು ಸಂದೇಶವನ್ನು ಹರಡುತ್ತಿದ್ದು, ಕಕ್ಕಟ್ಟುಕಾಡುವಿಗೆ 2 ರಸ್ತೆ ಇದೆಯೆಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು. ಗೋಷ್ಠಿಯಲ್ಲಿ ಕೆ.ಜಿ. ಚಂದ್ರ, ಹನೀಫ ಮತ್ತು ನಿಯಾಸ್ ಉಪಸ್ಥಿತರಿದ್ದರು.