ವೀರಾಜಪೇಟೆ, ಡಿ. 2: ಕೆದಮುಳ್ಳೂರು ಸಮೀಪದ ತೋರ ಗ್ರಾಮಕ್ಕೆ ಹೊಂದಿಕೊಂಡಿರುವ ಅಭಯಾರಣ್ಯದಲ್ಲಿ ಅಕ್ರಮ ಬೇಟೆಯೊಂದಿಗೆ ಗುಂಡಿಕ್ಕಿ ಕಡವೆಯನ್ನು ಹತ್ಯೆ ಮಾಡಿರುವ ತಂಡದ ಓರ್ವನನ್ನು ಬಂಧಿಸಿದ್ದು, ನಾಲ್ವರು ಪರಾರಿಯಾಗಿದ್ದಾರೆ.ನ. 30 ರಂದು ಕಳ್ಳಬೇಟೆ ನಿರತ ಐವರ ತಂಡ ಕಡವೆಯನ್ನು ಕೊಂದು, ಮಾಂಸದೊಂದಿಗೆ ಹಿಂತೆರಳುವ ವೇಳೆ, ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ಸುಳಿವು ಪಡೆದು ಓರ್ವನನ್ನು 20 ಕೆ.ಜಿ. ಮಾಂಸದೊಂದಿಗೆ ಕೋವಿ ಸಹಿತ ಬಂಧಿಸಿದ್ದಾರೆ. ತೋರ ನಿವಾಸಿ, ವೀರೇಂದ್ರ ಬಂಧಿತನಾಗಿದ್ದು, ಇನ್ನುಳಿದಂತೆ ಚೇಲಾವರ ಗ್ರಾಮ ಜೀವನ್ ಹಾಗೂ ಕೆದಮುಳ್ಳೂರಿನ ಗಣೇಶ್, ಕರುಂಬಯ್ಯ, ಮಹೇಶ್ ತಲೆಮರೆಸಿಕೊಂಡಿದ್ದಾರೆ.

ಬಂಧಿತ ಆರೋಪಿಯಿಂದ 20 ಕೆ.ಜಿ. ಮಾಂಸ ಹಾಗೂ ಒಂಟಿ ನಳಿಕೆ ಕೋವಿ ವಶಪಡಿಸಿಕೊಳ್ಳಲಾಗಿದ್ದು, ಕೃತ್ಯ ಸಂಬಂಧ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವದ ರೊಂದಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಿಸ್ತರಾಜ್, ಇಲಾಖೆಯ ರೋಷಿಣಿ, ಗೋಪಾಲ್, ಪ್ರಶಾಂತ್, ಕುಮಾರ್, ಅಶೋಕ್ ಹಾಗೂ ಆರ್‍ಆರ್‍ಟಿ ಸಿಬ್ಬಂದಿ ಭಾಗವಹಿಸಿದ್ದರು.