ವೀರಾಜಪೇಟೆ, ಡಿ. 2: ವೀರಾಜಪೇಟೆಯಲ್ಲಿರುವ ಕೊಡಗು ಜಿಲ್ಲಾ ಮಾರಾಟ ಮಹಾ ಮಂಡಳ(ಫೆಡರೇಶನ್)ದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದ ಹದಿನಾರು ಸ್ಥಾನಗಳ ಪೈಕಿ ಹದಿನೈದು ಸ್ಥಾನಗಳಲ್ಲಿ ಭಾರತೀಯ ಜನತಾ ಪಾರ್ಟಿ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ.

ಮಾರಾಟ ಮಹಾ ಮಂಡಳದ ಹದಿನೇಳು ಸ್ಥಾನಗಳಲ್ಲಿ 7 ಮಂದಿ ಅವಿರೋಧವಾಗಿ ಆಯ್ಕೆಯಾದರೆ ಬಿ. ಹಾಗೂ ಸಿ ತರಗತಿಗಳ 9 ಸ್ಥಾನಗಳಿಗೆ ಒಟ್ಟು 21 ಮಂದಿ ಸ್ಪರ್ಧಿಸಿದ್ದರು.

ಆಡಳಿತ ಮಂಡಳಿಯ ಬಿಸಿಎಂ ‘ಎ’ ಮೀಸಲಾತಿಗೆ 2 ಸ್ಥಾನಗಳಲ್ಲಿ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿ ಅವಿರೋಧ ಆಯ್ಕೆಯಾದುದರಿಂದ ಮೀಸಲಾತಿಯ ಒಂದು ಸ್ಥಾನಕ್ಕೆ ಸ್ಪರ್ಧೆ ಇಲ್ಲದೆ ಹಾಗೆಯೇ ಉಳಿದುಕೊಂಡಿದ್ದು 16 ಸ್ಥಾನಗಳಿಗೆ ಮಾತ್ರ ತಾ. 29 ರಂದು ಚುನಾವಣೆ ಘೋಷಿಸಲಾಗಿ ಅವಿರೋಧ ಸದಸ್ಯರುಗಳನ್ನು ಹೊರತು ಪಡಿಸಿದಂತೆ 9 ಸ್ಥಾನಗಳಿಗೆ ಮತದಾನ ನಡೆಯಿತು. ಆಡಳಿತ ಮಂಡಳಿಯ ‘ಬಿ’ ತರಗತಿಯಿಂದ ಕಂಜಿತಂಡ ಮಂದಣ್ಣ, ಸೋಮೆಯಂಡ ಮಂದಣ್ಣ, ಅನ್ನಂಡ ಚಿಣ್ಣಪ್ಪ ( ಪಕ್ಷೇತರ) ‘ಸಿ’ ತರಗತಿಯಿಂದ ಕುಪ್ಪಂಡ ಪೂವಯ್ಯ, ಚೇನಂಡ ಗಿರೀಶ್ ಪೂಣಚ್ಚ, ವಿ.ಪಿ. ಬೋಪಣ್ಣ, ತಾತಂಡ ಬಿಪಿನ್, ಕಂದ ಭೀಮಯ್ಯ, ಎಂ. ಕಿಟ್ಟು ಕುಟ್ಟಪ್ಪ ಇವರುಗಳು ಚುನಾಯಿತ ರಾಗಿದ್ದಾರೆ. ಆಡಳಿತ ಮಂಡಳಿಯ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದ ಎಂ.ಕೆ. ಕಾವೇರಪ್ಪ, ಕೆ. ಕುಶ ಬಿದ್ದಪ್ಪ, ಚಿನಿಯ, ಮರಿಯಪ್ಪ, ಪಿ. ವೀಣಾ ಮಹೇಶ್, ಕೆ.ಲತಾ ಹಾಗೂ ಕೆ.ಆರ್. ವಿನೋದ್ ಬಿಜೆಪಿಯ ಈ ಏಳು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 9 ಸ್ಥಾನಗಳಿಗೆÀ 21 ಸ್ಫರ್ಧಿಗಳಲ್ಲಿ ಒಂದು ಸ್ಥಾನಕ್ಕೆ ಮಾತ್ರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸ್ಪರ್ಧಿಸಿದ್ದರು. ಉಳಿದ 20 ಸ್ಥಾನಗಳಲ್ಲಿ 9ಮಂದಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದು ಉಳಿದಂತೆ 11 ಸ್ಥಾನಗಳಲ್ಲಿ ಬಿಜೆಪಿಯ ಬಂಡಾಯ ಹಾಗೂ ಪಕ್ಷೇತರರು ಸ್ಪರ್ಧಿಸಿದ್ದರು. 9 ಸ್ಥಾನಗಳಲ್ಲಿ 1 ಸ್ಥಾನ ಪಕ್ಷೇತರರ ಪಾಲಾಗಿ 8 ಸ್ಥಾನಗಳೂ ಬಿಜೆಪಿಗೆ ದಕ್ಕಿರುವದರಿಂದ ಅವಿರೋಧ ಸ್ಥಾನಗಳು 7 ಸೇರಿದರೆ ಆಡಳಿತ ಮಂಡಳಿಯಲ್ಲಿ ಬಿಜೆಪಿಯ ಬಹುಮತದ ಸಂಖ್ಯೆ 15ಕ್ಕೇರಿದೆ.