ಗೋಣಿಕೊಪ್ಪ ವರದಿ, ಡಿ.2 : ಪಾಲಿಬೆಟ್ಟದಲ್ಲಿ ದ ಕೂರ್ಗ್ ವೆಲ್‍ನೆಸ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಬರಿಗಾಲು (ದ ಬೇರ್‍ಫೂಟ್ ಮ್ಯಾರಥಾನ್) ಓಟ ಸ್ಪರ್ಧೆಯಲ್ಲಿ ನೂರಾರು ಕ್ರೀಡಾಪಟುಗಳು ಪಾಲ್ಗೊಂಡು ಸಂಭ್ರಮಿಸಿದರು. ಪಾಲಿಬೆಟ್ಟ ಟಾಟಾಕಾಫಿ ಮೈದಾನದಿಂದ ಆರಂಭಗೊಂಡ ಓಟದ ಸ್ಪರ್ಧೆ ಸುತ್ತಲಿನ ಗ್ರಾಮಗಳ ರಸ್ತೆಯಲ್ಲಿ ನಡೆಯಿತು.

ಪಾಲಿಬೆಟ್ಟ ವಿಶೇಷ ಮಕ್ಕಳ ಚೆಷೈರ್‍ಹೋಂ ಶಾಲೆಯ ಕ್ರೀಡಾಪಟುಗಳು ಪಾಲ್ಗೊಂಡು ವಿಶೇಷತೆ ಮೂಡಿಸಿದರು. ಹಗ್ಗ ಹಾಗೂ ತೆಂಗಿನಕಾಯಿ ಚಿಪ್ಪಿನಿಂದ ತಯಾರಿಸಿದ ಪದಕ ನೀಡಿ ಗೌರವಿಸಲಾಯಿತು. ಚಿಪ್ಪಿನಲ್ಲಿ ದ ಬೇರ್‍ಫೂಟ್ ಮ್ಯಾರಥಾನ್ ಲಾಂಛನ ಮುದ್ರಿಸಿರುವದು ವಿಶೇಷವಾಗಿತ್ತು.

ಪಾಲಿಬೆಟ್ಟ ವ್ಯಾಪ್ತಿಯ ಮುಖ್ಯರಸ್ತೆಯಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ 42 ಕಿ. ಮೀ. 21, 10 ಹಾಗೂ 5 ಕಿ. ಮೀ, ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಮಕ್ಕಳಿಂದ ವೃದ್ಧರವರೆಗೂ ಬರಿಗಾಲಿನಲ್ಲಿ ಓಡಿ ಗಮನ ಸೆಳೆದರು. ಬಿಟ್ಟಂಗಾಲ ದೇವಯ್ಯ ಮೆಮೇರಿಯಲ್ ಶಾಲೆಯ 19, ಸಾಯಿ ಶಂಕರ್ ಶಾಲೆಯ 20, ಕಾಪ್ಸ್ ಶಾಲೆಯ 15, ಚೆಷೈರ್‍ಹೋಂ ವಿಶೇಷ ಮಕ್ಕಳ ಶಾಲೆಯಿಂದ 6 ವಿದ್ಯಾರ್ಥಿಗಳು ಹಾಗೂ ಹೊರಜಿಲ್ಲೆಗಳ ಕ್ರೀಡಾಪಟುಗಳು ಓಟದಲ್ಲಿ ಪಾಲ್ಗೊಂಡಿದ್ದರು.

42 ಕಿ.ಮೀ. ಓಟ ವಿಭಾಗದ ಪುರುಷರಲ್ಲಿ ಜಿತನ್ ಪ್ರಥಮ, ಗಣಪತಿ ದ್ವಿತೀಯ, ಮಹಿಳೆಯರಲ್ಲಿ ನಿಶಾ ಪ್ರಥಮ, 21 ಕಿ.ಮೀ. ಪುರುಷರಲ್ಲಿ ವಿಶ್ವ ಪ್ರಥಮ, ಮಣಿ ದ್ವಿತೀಯ, ಡೆರಿನ್ ಮಾಚಯ್ಯ ತೃತೀಯ, ಮಹಿಳೆಯರಲ್ಲಿ ಕಾವೇರಿ ಪ್ರಥಮ, 10 ಕಿ.ಮೀ. ಪುರುಷರಲ್ಲಿ ಮಧು ಪ್ರಥಮ, ಬೋಜಣ್ಣ ದ್ವಿತೀಯ, ಬೋಪಣ್ಣ ತೃತೀಯ, ಮಹಿಳೆಯರಲ್ಲಿ ಕೊಟ್ಟಂಗಡ ಶೈಲಾ ಪ್ರಥಮ, ನಿಶಾ ದ್ವಿತೀಯ, ಚೈತ್ರಾ ತೃತೀಯ ಸ್ಥಾನ ಪಡೆದುಕೊಂಡರು.

ದ ಕೂರ್ಗ್ ವೆಲ್‍ನೆಸ್ ಫೌಂಡೇಶನ್ ಪ್ರಮುಖರುಗಳಾಧ ನಿಕಿ ಪೊನ್ನಪ್ಪ, ಸಮೃತಾ, ಹೀಮಾ, ಅಯ್ಯಪ್ಪ, ವರುಣ್ ಕಾರ್ಯಕ್ರಮ ನಡೆಸಿಕೊಟ್ಟರು. ಕ್ರೀಡೆಯ ನಡುವೆ ಸಾಂಸ್ಕøತಿಕ ಪ್ರದರ್ಶನ ಗಮನ ಸೆಳೆಯಿತು. ಕೋಲಾಟ್, ಪರೆಯಕಳಿ, ಉಮ್ಮತ್ತಾಟ್, ದುಡಿಕೊಟ್ಟ್ ಪ್ರದರ್ಶನಗೊಂಡವು. ಕಾಲೂರು ಗ್ರಾಮದ ಭೂಕುಸಿತ ಸಂತ್ರಸ್ತರ ಮಹಿಳೆಯರು ತಯಾರಿಸಿದ ಸಾಂಬಾರ್ ಪುಡಿಗಳನ್ನು ಮಾರಾಟ ಮಾಡಿದರು.

-ಸುದ್ದಿಪುತ್ರ