ಮಡಿಕೇರಿ, ಡಿ. 3: ಕೊಡಗು ಗೌಡ ಸಮಾಜಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಗೌಡ ಸಮಾಜಗಳಿಂದ ರೂ. 30.33 ಲಕ್ಷ ಹಣವನ್ನು ಕ್ರೋಢೀಕರಿಸಿ ಜಿಲ್ಲೆಯ 260 ಮಂದಿ ಸಂತ್ರಸ್ತರನ್ನು ಜಾತ್ಯತೀತ ನೆಲೆಯಲ್ಲಿ ಗುರುತಿಸಿ, ಸಂತ್ರಸ್ತ ಪತ್ರಕರ್ತರ ಸಹಿತ ಮಾನವೀಯ ದೃಷ್ಟಿಯಿಂದ ಸಹಾಯಧನ ವಿತರಿಸಲಾಯಿತು. ಈ ಬಗ್ಗೆ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾಹಿತಿ ನೀಡುತ್ತಾ, ಕುಶಾಲನಗರ ಗೌಡ ಯುವಕ ಸಂಘದ ಪ್ರಮುಖರು ವಿವಿಧ ಸಮಾಜಗಳ ಪದಾಧಿಕಾರಿಗಳ ಜತೆಗೂಡಿ ಪ್ರಾಕೃತಿಕ ವಿಕೋಪ ಸಂಭವಿಸಿರುವ ಎಲ್ಲ ಪ್ರದೇಶಗಳಿಗೆ ಭೇಟಿ ನೀಡಿ ಫಲಾನುಭವಿಗಳನ್ನು ಸರ್ವ ಜನಾಂಗದಿಂದ ಗುರುತಿಸಿರುವದಾಗಿ ಸ್ಪಷ್ಟಪಡಿಸಿದರು.(ಮೊದಲ ಪುಟದಿಂದ) ಆ ದಿಸೆಯಲ್ಲಿ ಮೈಸೂರು, ಬೆಂಗಳೂರು, ಯಲಹಂಕ, ದಕ್ಷಿಣಕನ್ನಡ, ವೀರಾಜಪೇಟೆ, ಮೂರ್ನಾಡು, ಚೇರಳ, ಚೆಟ್ಟಳ್ಳಿ, ಕುಶಾಲನಗರ, ಪಾರಾಣೆ ಗೌಡ ಸಮಾಜಗಳೊಂದಿಗೆ, ನಿವೃತ್ತ ಗೌಡ ನೌಕರರ ಸಂಘದಿಂದ ರೂ.30.33 ಲಕ್ಷ ಸಂಗ್ರಹಿಸಿ ಫಲಾನುಭವಿಗಳಿಗೆ ನೀಡುತ್ತಿರುವದಾಗಿ ವಿವರಿಸಿದರು. ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕೊಡಗು, ದ.ಕ. ಸಮಾಜದ ಅಧ್ಯಕ್ಷ ತೇನನ ರಾಜೇಶ್, ಮಡಿಕೇರಿ ಗೌಡ ಸಮಾಜ ಅಧ್ಯಕ್ಷ ಪೇರಿಯನ ಜಯಾನಂದ, ಕುಶಾಲನಗರ ಸಮಾಜ ಅಧ್ಯಕ್ಷ ಪೊನ್ನಚನ ಮೋಹನ್ ಸೇರಿದಂತೆ ಇತರ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದು, ಆನಂದ ಕರಂದ್ಲಾಜೆ ನಿರೂಪಿಸಿದರು.