ಕುಶಾಲನಗರ, ಡಿ. 2: ಪುಟಾಣಿ ಕುಟುಂಬ ಸದಸ್ಯರು ಚೆಸ್ ಪಂದ್ಯಾಟದಲ್ಲಿ ತೊಡಗಿಸಿಕೊಂಡು ಇದೀಗ ರಾಷ್ಟ್ರೀಯ ಮಟ್ಟದ ಆಟಗಾರರಾಗಿ ಹೊರಹೊಮ್ಮುವ ಮೂಲಕ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೊಸದೊಂದು ಗರಿ ಮೂಡಿಸುತ್ತಿರುವದು ಹೆಮ್ಮೆಯ ಸಂಗತಿ.

ಕುಶಾಲನಗರದ ಕೆನರಾ ಬ್ಯಾಂಕ್ ಅಧಿಕಾರಿ ನಾರಾಯಣ್ ಅವರ ಹಿರಿಯ ಪುತ್ರಿ ಪ್ರಿಯಾಂಕ ಇದುವರೆಗೆ 90ಕ್ಕೂ ಅಧಿಕ ಚೆಸ್ ಪಂದ್ಯಾಟಗಳಲ್ಲಿ ಪಾಲ್ಗೊಂಡಿದ್ದು, ಮೂರು ಬಾರಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಸಹೋದರಿ ಮಾನಸ ಇದೇ ಪ್ರಥಮ ಬಾರಿಗೆ ರಾಷ್ಟ್ರೀಯ ಚೆಸ್ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದಾರೆ.

ಪ್ರಿಯಾಂಕ ನಾರಾಯಣ್ ಪ್ರಸಕ್ತ ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ಪಿ.ಯು. ವ್ಯಾಸಂಗ ಮಾಡುತ್ತಿದ್ದು, 5ನೇ ತರಗತಿಯಲ್ಲಿ 11ರ ವಯೋಮಿತಿ ಅಡಿಯಲ್ಲಿ ಯುಕೆಸಿಎ ಆಶ್ರಯದಲ್ಲಿ ರಾಜ್ಯ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿ, ನಂತರ ದೆಹಲಿಯಲ್ಲಿ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದರು. 8ನೇ ತರಗತಿಯಲ್ಲಿ ಎಸ್‍ಜಿಎಫ್‍ಐ ಆಶ್ರಯದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ತೆಲಂಗಾಣದಲ್ಲಿ ರಾಷ್ಟ್ರೀಯ ಮಟ್ಟದ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದಳು.

ಎಸ್.ಎಸ್.ಎಲ್.ಸಿ. ವ್ಯಾಸಂಗ ಸಂದರ್ಭ ರಾಜ್ಯಮಟ್ಟದ ಚೆಸ್ ಪಂದ್ಯಾಟದಲ್ಲಿ ಎರಡನೇ ಸ್ಥಾನ ಗಳಿಸಿದ ಪ್ರಿಯಾಂಕ ತೆಲಂಗಾಣದ ವಾರಂಗಲ್‍ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡಿದ್ದು ಹೆಮ್ಮೆಯ ಸಂಗತಿ. ಇದೀಗ 2019 ರ ಏಪ್ರಿಲ್‍ನಲ್ಲಿ ಪ್ರಿಯಾಂಕ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗೆ ಶ್ರೀಲಂಕಾಗೆ ತೆರಳಲು ಸಿದ್ದಳಾಗುತ್ತಿದ್ದಾಳೆ. 2013, 2017 ರಲ್ಲಿ ದಕ್ಷಿಣ ಭಾರತ ಮಟ್ಟದಲ್ಲಿ ಕರಾಟೆಯಲ್ಲಿ ಚಿನ್ನದ ಪದಕ ಪಡೆದ ಪ್ರಿಯಾಂಕ, ಭರತನಾಟ್ಯ ಸೀನಿಯರ್ ಮುಗಿಸಿದ್ದು ಬ್ಯಾಡ್ಮಿಂಟನ್ ಆಟದಲ್ಲಿಯೂ ವಿಭಾಗ ಮಟ್ಟದಲ್ಲಿ ಆಟವಾಡಿರುವದಾಗಿ ‘ಶಕ್ತಿ’ಯೊಂದಿಗೆ ತನ್ನ ಸಾಧನೆ ಬಗ್ಗೆ ವಿವರಿಸುತ್ತಾಳೆ. ತನ್ನ ಸಾಧನೆ ಮೂಲಕ ಹಲವು ಸಂಘ-ಸಂಸ್ಥೆಗಳಿಂದ ಗೌರವಕ್ಕೆ ಭಾಜನಳಾಗಿದ್ದಾಳೆ.

ಇದೀಗ ನಾರಾಯಣ ಅವರ ಎರಡನೇ ಪುತ್ರಿ ಫಾತಿಮಾ ಪ್ರೌಢಶಾಲೆಯ 8ನೇ ತರಗತಿಯ ಮಾನಸ ಮಧುಗಿರಿಯಲ್ಲಿ ನಡೆದ ರಾಜ್ಯಮಟ್ಟದ ಚೆಸ್ ಪಂದ್ಯಾಟದಲ್ಲಿ ವಿಜೇತರಾಗುವದರೊಂದಿಗೆ ಮಹಾರಾಷ್ಟ್ರದ ದಾದಾರ್‍ನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುವ ಮಾನಸ ಇದುವರೆಗೆ 50ಕ್ಕೂ ಅಧಿಕ ಚೆಸ್ ಪಂದ್ಯಾಟಗಳಲ್ಲಿ ಪಾಲ್ಗೊಂಡಿರುವ ದಾಖಲೆ ಕಾಣಬಹುದು.

ಸಹೋದರಿಯರ ನಡುವೆ ಪುಟ್ಟ ಬಾಲಕ ಮಿಲಿಂದ ನಾರಾಯಣ್ 2ನೇ ತರಗತಿಯಲ್ಲಿದ್ದರೂ ತಾನೂ ಕಡಿಮೆಯಿಲ್ಲ ಎನ್ನುವಂತೆ ಚೆಸ್ ಆಟಗಾರನಾಗಿ ಕುಟುಂಬ ಸದಸ್ಯರೆಲ್ಲರೂ ಕ್ರೀಡಾಪಟುಗಳಾಗಿ ಹೊರಹೊಮ್ಮುತ್ತಿರುವದು ತಂದೆ ನಾರಾಯಣ್ ಮತ್ತು ತಾಯಿ ಸಂಧ್ಯಾ ಅವರಿಗೆ ಎಲ್ಲಿಲ್ಲದ ಸಂತಸದ ಸಂಗತಿಯಾಗಿದೆ. ಸ್ಥಳೀಯ ಫಾತಿಮಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪುಟಾಣಿಗಳು ತಮ್ಮ ಪಾಠ ಪ್ರವಚನದ ನಡುವೆ ಚೆಸ್ ಆಟದಲ್ಲಿ ಮುಳುಗಿರುವದು ಮನೆಗೆ ತೆರಳಿದ ‘ಶಕ್ತಿ’ಗೆ ಗೋಚರಿಸಿತು. ಮಕ್ಕಳ ಪ್ರತಿಭೆಗೆ ತಾನು ಮತ್ತು ತನ್ನ ಪತ್ನಿ ಎಲ್ಲಾ ರೀತಿಯ ಬೆಂಬಲ ನೀಡುತ್ತಿದ್ದೇವೆ. ದೇವರ ದಯೆಯಿಂದ ಯಶಸ್ಸು ಕೂಡ ದೊರೆಯುತ್ತಿದೆ ಎಂದು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ. ಶಾಲಾ ಮಟ್ಟದಿಂದ ತೆರಳುವ ಸಂದರ್ಭ ಶಿಕ್ಷಣ ಇಲಾಖೆ ಖರ್ಚು ವೆಚ್ಚ ಭರಿಸುತ್ತಿದೆ. ಉಳಿದಂತೆ ತಾವು ಭರಿಸುತ್ತಿದ್ದೇವೆ ಎನ್ನುತ್ತಾರೆ ನಾರಾಯಣ್.

ಹಿರಿಯ ಪುತ್ರಿ ಪ್ರಿಯಾಂಕ ನಾರಾಯಣ್ ಅವರಿಗೆ ಜಿಲ್ಲಾ ಮಕ್ಕಳ ಅಸಾಧಾರಣ ಪ್ರತಿಭಾ ಪ್ರಶಸ್ತಿಯೊಂದಿಗೆ ನಗದು 10 ಸಾವಿರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಯುವಜನ ಇಲಾಖೆಯಿಂದ ಪ್ರಶಸ್ತಿಗಳು ಲಭಿಸಿವೆ. ಉಳಿದಂತೆ ತರಬೇತಿಯ ಹೆಚ್ಚಿನ ಖರ್ಚು ವೆಚ್ಚಗಳು ಪೋಷಕರ ಮೇಲೆ ಹೊರೆ ಬೀಳುತ್ತಿದೆ. ಚೆಸ್ ಆಟದ ತರಬೇತುದಾರರಾಗಿ ಮಣಿ, ಆರೋಗ್ಯಸ್ವಾಮಿ, ಕರಾಟೆ ತರಬೇತುದಾರರಾಗಿ ಇಕ್ಬಾಲ್, ಬ್ಯಾಡ್ಮಿಂಟನ್ ಗುರುಗಳಾಗಿ ಪ್ರಶಾಂತ್‍ಮಯ್ಯ ತಮ್ಮ ಸಾಧನೆಗಾಗಿ ಬೆನ್ನೆಲುಬಾಗಿ ನಿಂತಿದ್ದಾರೆ ಎನ್ನುತ್ತಾರೆ ಸಾಧಕರು.

ಈ ಸಾಧಕರ ತಂಡಕ್ಕೆ ಸಂಘ-ಸಂಸ್ಥೆಗಳು, ಸರಕಾರ ಬೆನ್ನೆಲುಬಾಗಿ ನಿಂತಲ್ಲಿ ಮುಂದಿನ ದಿನಗಳಲ್ಲಿ ಪುಟಾಣಿಗಳು ಅಂತರರಾಷ್ಟ್ರೀಯ ಮಟ್ಟದ ಸಾಧಕರಾಗಿ ಹೊರಬರುವದು ನಿಶ್ಚಿತ.

- ಚಂದ್ರಮೋಹನ್