ಮಡಿಕೇರಿ, ಡಿ. 2: ಕೊಡಗು ಜಿಲ್ಲೆಯಲ್ಲಿ ಸುಗ್ಗಿಯ ಹಬ್ಬ ಹುತ್ತರಿ ಕಳೆದರೂ, ಕಳೆದ ಮುಂಗಾರುವಿನ ಪ್ರಾಕೃತಿಕ ವಿಕೋಪದ ತೀವ್ರತೆಯಿಂದ ಬಹುಪಾಲು ಗ್ರಾಮೀಣ ಜನತೆ ಹೊರಗೆ ಬರಲು ಸಾಧ್ಯವಾಗಿಲ್ಲ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲೆಯ ಈಗಿನ ಪರಿಸ್ಥಿತಿ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಪ್ರಾಕೃತಿಕ ಹೊಡೆತದಿಂದ ತತ್ತರಿಸಿರುವ ಆರು ಗ್ರಾ.ಪಂ. ವ್ಯಾಪ್ತಿಯ ಜನತೆ ಭವಿಷ್ಯದ ಕುರಿತು ಇನ್ನು ಕೂಡ ಆತಂಕದೊಂದಿಗೆ ನೋವಿನಲ್ಲಿ ಇದ್ದಾರೆ ಎಂದರು.

ಮಾದಾಪುರ, ಹರದೂರು, ಕೆದಕಲ್, ಕಾಂಡನಕೊಲ್ಲಿ, ಹಾಲೇರಿ, ಮಕ್ಕಂದೂರು, ಮುಕ್ಕೊಡ್ಲು ವ್ಯಾಪ್ತಿಯ ಹಾರಂಗಿ ಹಿನ್ನೀರು ಪ್ರದೇಶದ ಹಟ್ಟಿಹೊಳೆ ಮತ್ತು ಮಾದಾಪುರ ಹೊಳೆಗಳ ನೀರು ಇಂದಿಗೂ ಮಣ್ಣು ಮಿಶ್ರಿತ ಕಲುಷಿತ ಹರಿಯುವಿಕೆಯೊಂದಿಗೆ ತಿಳಿಯಾಗಿಲ್ಲ ಎಂದು ಬೊಟ್ಟು ಮಾಡಿದರು. ಇಂತಹ ನೀರು ಜನರು ಸೇರಿದಂತೆ ಜಾನುವಾರುಗಳ ಸಹಿತ ಜಲಚರಗಳಿಗೂ ಕುತ್ತು ಉಂಟುಮಾಡಲಿದೆ ಎಂದು ಅವರು ನೆನಪಿಸಿದರು.

ಜಿಲ್ಲೆಯಲ್ಲಿ ಸದಾ ಮೋಡ ಕವಿದ ವಾತಾವರಣದಿಂದ ಮಳೆಯ ಆತಂಕ ಮುಂದುವರಿದ ಪರಿಣಾಮವಾಗಿ ರೈತರು ಬೆಳೆದಿರುವ, ಭತ್ತ ಬೆಳೆ ಸಹಿತ ಕಾಫಿ, ಕರಿಮೆಣಸು ಸಹಿತ ಇತರ ಫಸಲುಗಳಿಗೆ ಹಾನಿ ಹೆಚ್ಚಾಗಲಿದ್ದು, ಕಾಫಿ ಮಂಡಳಿ, ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆಯಿಂದ ಪರಿಪೂರ್ಣ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಿಲ್ಲವೆಂದು ಅವರು ಸಂಶಯ ವ್ಯಕ್ತಪಡಿಸಿದರು.

ಮತ್ತೆ ಹೆದ್ದಾರಿಗೂ ಅಪಾಯ: ಅಪ್ಪಿ ತಪ್ಪಿ ಅಡ್ಡ ಮಳೆ ಹೊಡೆದು ನಾಲ್ಕೈದು ಇಂಚು ಸುರಿದರೆ, ಪ್ರಸಕ್ತ ತಾತ್ಕಾಲಿಕವಾಗಿ ನಿರ್ಮಾಣಗೊಂಡಿರುವ ಮಡಿಕೇರಿ - ಸೋಮವಾರಪೇಟೆ ಹೆದ್ದಾರಿಯ ಹಾಲೇರಿ, ಮಂಗಳೂರು ರಸ್ತೆಯ ಜೋಡುಪಾಲ ಮುಂತಾದೆಡೆ ಮತ್ತೆ ವಾಹನಗಳ ಸಂಚಾರಕ್ಕೆ ಅಪಾಯ ಎದುರಾಗಲಿದೆ ಎಂದು ಶಾಸಕರು ಕಳವಳ ವ್ಯಕ್ತಪಡಿಸಿದರು.

ನೂರಾರು ಮಂದಿಯ ನೋವು : 2ನೇ ಮೊಣ್ಣಂಗೇರಿ, ಜೋಡುಪಾಲ, ಕಾಲೂರು, ಮಕ್ಕಂದೂರು, ಉದಯಗಿರಿ, ಹಾಲೇರಿಯಂತಹ ಪ್ರದೇಶಗಳ ನಿರಾಶ್ರಿತರು ಮತ್ತು ಕಾರ್ಮಿಕ ಕುಟುಂಬಗಳಿಗೆ ಮತ್ತು ಹಲವು ಗ್ರಾಮಸ್ಥರ ಮನೆಗಳಿಗೆ ಇನ್ನು ಕೂಡ ಸಂಪರ್ಕ ರಸ್ತೆ, ಕುಡಿಯುವ ನೀರು ಕಲ್ಪಿಸಲು ಸಾಧ್ಯವಾಗಿಲ್ಲವೆಂದು ಪ್ರತಿನಿತ್ಯ ದೂರುಗಳು ಕೇಳುವಂತಾಗಿದೆ ಎಂದು ನೋವಿನ ನುಡಿಯಾಡಿದರು.

ತಾ. 8 ರಂದು ಮುಖ್ಯಮಂತ್ರಿಗಳೊಂದಿಗೆ ಮುಕ್ತ ಸಮಾಲೋಚನೆ ಬಳಿಕ, ಆರು ಗ್ರಾ.ಪಂ. ವ್ಯಾಪ್ತಿಯ 40ಕ್ಕೂ ಅಧಿಕ ಹಳ್ಳಿಗಳ ಜನತೆಯ ಬೇಕು ಬೇಡಿಕೆಗಳೊಂದಿಗೆ, ಬೆಳೆಗಾರರ ಹಿತಕ್ಕಾಗಿ ಎಲ್ಲ ರೀತಿಯ ಹೋರಾಟಕ್ಕೂ ಮುಂದಾಗುವದಾಗಿ ಅಪ್ಪಚ್ಚುರಂಜನ್ ಸುಳಿವು ನೀಡಿದರು. ತಾವು ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದು, ಓರ್ವ ಶಾಸಕನಾಗಿ ಜನರ ಕಷ್ಟಗಳಿಗೆ ರಾಜಕಾರಣ ಮಾಡಲಾರೆ ಎಂದು ಘೋಷಿಸಿದರು.