ವೀರಾಜಪೇಟೆ, ಡಿ. 2: ಕೊಡಗಿನ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಅವರು ದಲಿತ ಸಂಘರ್ಷ ಸಮಿತಿಯ ಮುಖಂಡರೊಂದಿಗೆ ಮೊಬೈಲ್‍ನಲ್ಲಿ ಇಂದು ಬೆಂಗಳೂರಿನಿಂದಲೇ ಮಾತುಕತೆ ನಡೆಸಿದ ನಂತರ ಸಚಿವರು ಸಂಘಟನೆಯ ಅಗತ್ಯ ಬೇಡಿಕೆಗಳನ್ನು ಈಡೇರಿಸುವದಾಗಿ ಭರವಸೆ ನೀಡಿದ ಮೇರೆಗೆ ಹಾಗೂ ಈಗ ಸರಕಾರ ಗುರುತಿಸಿರುವ ವಿವಿಧೆಡೆಯ ನಿವೇಶನಗಳಲ್ಲಿ ಶೆಡ್‍ಗಳನ್ನು ನಿರ್ಮಿಸಲು ಅನುಮತಿ ನೀಡಿರುವದರಿಂದ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿರು ವದಾಗಿ ಸಂಘಟನೆಯ ಜಿಲ್ಲಾ ಸಂಚಾಲಕ ಎಚ್.ಆರ್.ಪರಶುರಾಮ್ ತಿಳಿಸಿದ್ದಾರೆ.
ಸಚಿವ ಮಹೇಶ್ ಅವರೊಂದಿಗೆ ಮೊಬೈಲ್‍ನಲ್ಲಿ ಮಾತುಕತೆ ನಡೆಸಿದಾಗ ಈಗ ಸರಕಾರ ಬಿರುನಾಣಿ, ತೆರಾಲು, ಬೇಟೋಳಿ ಹಾಗೂ ಕೆದಮುಳ್ಳೂರು ಗ್ರಾಮಗಳಲ್ಲಿ ಗುರುತಿಸಿರುವ ನಿವೇಶನದಲ್ಲಿ ಸಂಘಟನೆಯ ಫಲಾನುಭವಿಗಳು ಶೆಡ್ ನಿರ್ಮಿಸಬಹುದು. ಮುಂದಿನ ದಿನಗಳಲ್ಲಿ ಸರಕಾರದಿಂದ ನಿವೇಶನದ ಫಲಾನುಭವಿಗಳಿಗೆ ಮೂಲ ಸೌಲಭ್ಯದೊಂದಿಗೆ ಮನೆ ಕಟ್ಟಿ ಕೊಡಲಾಗುವದು ಎಂದು ಭರವಸೆ ನೀಡಿದರೆಂದು ಪರಶುರಾಮ್ ತಿಳಿಸಿದರು.
ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಇಂದು ಬೆಳಿಗ್ಗೆ ಧರಣಿ ನಿರತರನ್ನು ಭೇಟಿ ಮಾಡಿದಾಗ ಇನ್ನು ಮುಂದೆ ಲೈನು ಮನೆಗಳಿಗೆ ಹಿಂತಿರುಗಿ ಹೋಗುವದಿಲ್ಲ. ಸರಕಾರ ನಿಗದಿ ಪಡಿಸುವ ಗಂಜಿ ಕೇಂದ್ರ ಇಲ್ಲವೇ ಸರಕಾರ ಗುರುತಿಸಿರುವ ನಿವೇಶನಗಳಿಗೆ ತೆರಳಿ ಶೆಡ್ ನಿರ್ಮಿಸಿ ವಾಸಿಸುವದಾಗಿ ಹಠ ಹಿಡಿದಿದ್ದರಿಂದ ವೀಣಾ ಅಚ್ಚಯ್ಯ, ಉಸ್ತುವಾರಿ ಸಚಿವರನ್ನು ಮೊಬೈಲ್‍ನಲ್ಲಿ ಸಂಪರ್ಕಿಸಿದರು. ನಂತರ ಪರಶುರಾಮ್ ಸಚಿವರೊಂದಿಗೆ ಮಾತುಕತೆ ನಡೆಸಿ ನಿವೇಶನ ರಹಿತ ಫಲಾನುಭವಿಗಳು ಶೆಡ್ ನಿರ್ಮಿಸಲು ಸಮ್ಮತಿ ನೀಡಿದ ಮೇರೆಗೆ ಮುಷ್ಕರವನ್ನು ಹಠಾತ್ ಮುಂದೂಡುವದಾಗಿ ಹೇಳಿದರು.
ವೀಣಾ ಅಚ್ಚಯ್ಯ ಅವರು ಸಂಘಟನೆ ಮುಖಂಡರನ್ನು ಭೇಟಿ ಮಾಡಿ ಮುಂದಿನ 15ದಿನಗಳೊಳಗೆ ನಿವೇಶನ ವಿತರಿಸುವದಾಗಿ ಭರವಸೆ ನೀಡಿದರೂ; ಇದಕ್ಕೆ ಸಮ್ಮತಿಸದ ಮುಖಂಡರು ಉಸ್ತುವಾರಿ ಸಚಿವರನ್ನು ಭೇಟಿಗೆ ಹಠ ಹಿಡಿದರು. ನಂತರ ಸಚಿವರನ್ನು ಸಂಪರ್ಕಿಸಲಾಯಿತು. ತಾ. 6ರಂದು ಉಸ್ತುವಾರಿ ಸಚಿವ ಮಹೇಶ್ ಮಡಿಕೇರಿಗೆ ಭೇಟಿ ನೀಡಲಿದ್ದು ಆಗಲೂ ಮುಖಂಡರು ಮಾತುಕತೆ ನಡೆಸುವಂತೆ ಆಹ್ವಾನಿಸಿದ್ದಾರೆ. ತಾ.8ರಂದು ಮುಖ್ಯಮಂತ್ರಿಗಳು ಮಡಿಕೇರಿಗೆ ಆಗಮಿಸಲಿದ್ದು ಅವರನ್ನು ಮುಖಂಡರು ಭೇಟಿ ಮಾಡಲು ಅವಕಾಶವಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ನಿವೇಶನ ರಹಿತರು ಈಗ ಗುರುತಿಸಿರುವ ಸ್ಥಳದಲ್ಲಿ ಗುಡಿಸಲು ನಿರ್ಮಿಸಲು ಅವಕಾಶ ನೀಡುವಂತೆ ಕೊಡಗು ಜಿಲ್ಲಾಧಿಕಾರಿ ಅವರೊಂದಿಗೆ ತಕ್ಷಣ ಮಾತುಕತೆ ನಡೆಸುವದಾಗಿ ಸಚಿವ ಮಹೇಶ್ ಸಂಘಟನೆಯ ಮುಖಂಡರಿಗೆ ಭರವಸೆ ನೀಡಿದ್ದು, ವೀಣಾ ಅಚ್ಚಯ್ಯ ಭೇಟಿ ಸಂದರ್ಭ ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಹಸೈನಾರ್ ಹಾಜಿ, ಅಲ್ಪ ಸಂಖ್ಯಾತರ ಮೈಸೂರು ಘಟಕದ ಎಂ.ಎ.ಉಸ್ಮಾನ್, ವಕ್ಫ್‍ಬೋರ್ಡ್‍ನ ಕೆ.ಎಂ.ಬಾವ, ಕಾಂಗ್ರೆಸ್ ಪಕ್ಷದ ಹಿಂದುಳಿದ ಘಟಕದ ಅಧ್ಯಕ್ಷ ವಿ.ಕೆ.ಸತೀಶ್ ಕುಮಾರ್ ಮತ್ತಿತರರು ಹಾಜರಿದ್ದರು.