ಸುಂಟಿಕೊಪ್ಪ, ಡಿ. 3: ಮೇಲ್ವರ್ಗದಿಂದ ಶೋಷಿತರಾಗಿ ಸಮಾಜದಲ್ಲಿ ಧಾರ್ಮಿಕವಾಗಿ ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರದೆ ಅತಂತ್ರ ಸ್ಥಿತಿಯಲ್ಲಿದ್ದ ಸಮಾಜಕ್ಕೆ ಶ್ರೀ ನಾರಾಯಣ ಗುರುಗಳು ದಾರಿ ದೀಪವಾದರು ಎಂದು ಮೈಸೂರು ಬಿಲ್ಲವ ಸಂಘದ ಗೌರವಾಧ್ಯಕ್ಷರಾದ ಜೆ.ಬಿ. ಪೂಜಾರಿ ಹೇಳಿದರು.
ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯಂತ್ಯೋತ್ಸವ ಮತ್ತು ದೇಯಿಬೈದೇದಿ ಬಿಲ್ಲವ ಮಹಿಳಾ ಸಂಘದ 7ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಹೋಬಳಿ ನೆರೆ
ಸಂತ್ರಸ್ತರಿಗೆ ನೆರವು ಕಾರ್ಯಕ್ರಮ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರೀ ನಾರಾಯಣ ಗುರುಗಳು ಹಿಂದುಳಿದ ವರ್ಗಗಳಾದ ತೀಯರ್, ಬಿಲ್ಲವ, ಈಡಿಗ ಸಮಾಜವನ್ನು ಒಗ್ಗೂಡಿಸಿ ಅವರ ಮಕ್ಕಳನ್ನು ಶೈಕ್ಷಣಿಕವಾಗಿ ಮುಂದೆ ಬರಲು ಕಾರಣಿಭೂತರಾದರು ಎಂದರು.
ಹೊಸಪೇಟೆ ಆರ್ಯ ಈಡಿಗ ಸಮಾಜದ ಗೌರವಧ್ಯಕ್ಷ ರಾಘವೇಂದ್ರ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಆಸ್ಪøಶ್ಯತೆ ನಿವಾರಣೆಗಾಗಿ ಲೋಕಸಂಚಾರ ಮಾಡಿದ ಶ್ರೀ ನಾರಾಯಣ ಗುರುಗಳು ಹಿಂದುಳಿದ ವರ್ಗದವರನ್ನು ಮುಖ್ಯ ವಾಹಿನಿಗೆ ತರಲು ಶ್ರಮಿಸಿದ್ದ ಕಠಿಣ ಪರಿಶ್ರಮದಿಂದ ಇಂದು ಈಡಿಗ,ಬಿಲ್ಲವ ತೀಯ ಜನಾಂಗದವರು ಸಮಾಜದಲ್ಲಿರುವರು ಎಂದರು.
ಸೋಮವಾರಪೇಟೆ ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷ ಬಿ.ಎ. ಭಾಸ್ಕರ ಮಾತನಾಡಿ ಶೈಕ್ಷಣಿಕವಾಗಿ ಮಕ್ಕಳನ್ನು ಮುಂದೆ ತಂದು ಸಮಾಜದಲ್ಲಿ ಅವರು ತಲೆ ಎತ್ತಿ ನಡೆಯಲು ಪೋಷಕರು ಶ್ರಮವಹಿಸಬೇಕು ಎಂದರು.
ಮಂಗಳೂರು ಯುವ ವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಮಹೇಶ್ಚಂದ್ರ ಸಾಲ್ಯಾನ್ ಮಾತನಾಡಿ ಪೋಷಕರು ಸಮಾಜದ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದೊಯ್ಯುವದು ಮುಖ್ಯ. ಇದರಿಂದ ಮುಂದಿನ ಪೀಳಿಗೆಗೆ ಆಚಾರ ವಿಚಾರಗಳ ಮಹತ್ವ ತಿಳಿಯುತ್ತದೆ ಎಂದರು.
ಸುಂಟಿಕೊಪ್ಪ ಶ್ರೀ ನಾರಾಯಣ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಣಿ ಮುಖೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ದೇಯಿಬೈದೇದಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಮಧುನಾಗಪ್ಪ, ಕುಶಾಲನಗರ ಕೋಟಿಚೆನ್ನಯ್ಯ ಬಿಲ್ಲವ ಸಂಘದ ಹೆಚ್.ಬಿ. ರಮೇಶ್, ವೀರಾಜಪೇಟೆ ಬಿಲ್ಲವ ಸಮಾಜದ ಅಧ್ಯಕ್ಷ ಗಣೇಶ ಪೂಜಾರಿ, ಮಾತನಾಡಿದರು.
ಸುಂಟಿಕೊಪ್ಪ ಹೋಬಳಿಯ ಬಿಲ್ಲವ ಸಮಾಜದ 2017-18ನೇ ಸಾಲಿನಲ್ಲಿ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕಪಡೆದ ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಜಯಂತಿ ಕೃಷ್ಣಪ್ಪ ಪ್ರಾರ್ಥಿಸಿ, ಉಪಾಧ್ಯಕ್ಷ ಬಿ.ಟಿ. ರಮೇಶ್ ಸ್ವಾಗತಿಸಿ, ವೆಂಕಪ್ಪ ಕೊಟ್ಯಾನ್ ನಿರೂಪಿಸಿ, ಎಂ.ಎಸ್. ಸುನೀಲ್ ವಂದಿಸಿದರು.