ಸೋಮವಾರಪೇಟೆ,ಡಿ.3: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ವಿತರಿಸಲ್ಪಡುವ ಪಡಿತರಗಳಿಗೆ, ಸಂಬಂಧಿಸಿದ ಕಾರ್ಡ್ದಾರರಿಂದ ಬೆರಳಚ್ಚು ಪಡೆಯುವ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಈ ಕ್ರಮವನ್ನು ರದ್ದುಗೊಳಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಬಿಪಿಎಲ್ ಕುಟುಂಬಗಳಿಗೆ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ವಿತರಿಸಲಾಗುತ್ತಿದ್ದು, ಇದರೊಂದಿಗೆ ತೊಗರಿ ಬೇಳೆ ಮತ್ತು ಸೀಮೆಎಣ್ಣೆ ನೀಡಲಾಗುತ್ತಿದೆ. ಪ್ರತಿ ತಿಂಗಳು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯ ಮೂಲಕ ಪಡಿತರ ವಿತರಿಸಲಾಗುತ್ತಿದ್ದು, ಕಳೆದ ಕೆಲ ತಿಂಗಳುಗಳಿಂದ ಸರ್ಕಾರ ನೂತನ ನಿಯಮ ಜಾರಿಗೆ ತಂದಿದೆ.
ಅದರಂತೆ ಪಡಿತರ ಚೀಟಿದಾರರು ಪ್ರತಿ ತಿಂಗಳು ಪಡಿತರ ಸಾಮಗ್ರಿ ಹೊಂದಿಕೊಳ್ಳಲು ನಿಗದಿತ ದಿನಾಂಕಗಳಂದು ನ್ಯಾಯಬೆಲೆ ಅಂಗಡಿಗೆ ತೆರಳಿ ಬೆರಳಚ್ಚು ನೀಡಬೇಕಿದೆ. ಇದಾಗಿ ನಾಲ್ಕೈದು ದಿನಗಳ ನಂತರ ಪಡಿತರ ಸಾಮಗ್ರಿ ಪಡೆಯಬೇಕಿದ್ದು, ಸರ್ಕಾರದ ಈ ನಿಯಮದಿಂದ ಬಿಪಿಎಲ್ ಚೀಟಿದಾರರು ತೊಂದರೆ ಅನುಭವಿಸುವಂತಾಗಿದೆ.
ಪ್ರತಿ ತಿಂಗಳು ಎರಡು ಬಾರಿ ನ್ಯಾಯಬೆಲೆ ಅಂಗಡಿಗೆ ತೆರಳಬೇಕಿದ್ದು, ಸಿಗುವ 7 ಕೆ.ಜಿ. ಅಕ್ಕಿಗೆ ಎರಡು ದಿನ ಕೂಲಿ ಕೆಲಸ ಬಿಟ್ಟು ಬರಬೇಕಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಕೆಲವೊಮ್ಮೆ ಸರ್ವರ್ ಸಮಸ್ಯೆ, ಇಂಟರ್ನೆಟ್ ಸಮಸ್ಯೆ ಉಂಟಾಗುವ ಸಂದರ್ಭ ಬೆರಳಚ್ಚು ನೀಡಲು ಸಾಧ್ಯವಾಗುವದಿಲ್ಲ. ಇದರೊಂದಿಗೆ ಒಂದು ದಿನಕ್ಕೆ ಕೆಲವೇ ಮಂದಿಯಿಂದ ಮಾತ್ರ ಬೆರಳಚ್ಚು ಪಡೆಯಬಹುದಾಗಿದ್ದು, ಸಂಜೆಯವರೆಗೂ ಕಾದು ಬರಿಗೈಯಲ್ಲಿ ವಾಪಸ್ ಬರಬೇಕಿದೆ ಎಂದು ಹಲವಷ್ಟು ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.
ಈಗಾಗಲೇ ಉಚಿತ ಪಡಿತರ ಪಡೆಯಲು ಗ್ರಾಹಕರು ಒಂದು ದಿನ ಕೂಲಿ ಕೆಲಸ ಬಿಟ್ಟು ನ್ಯಾಯಬೆಲೆ ಅಂಗಡಿಯ ಎದುರು ನಿಲ್ಲುತ್ತಿದ್ದು, ಇಲಾಖೆಯ ನೂತನ ನಿಯಮದಿಂದ ತಿಂಗಳಿಗೆ 2 ರಿಂದ 3 ದಿನಗಳ ಕಾಲ ಪಡಿತರ ಪಡೆಯಲು ಕಾಯ್ದಿರಿಸಬೇಕಿದೆ.
ತಾಲೂಕಿನ ಬೆಂಬಳೂರು ಗ್ರಾಮದ ಧವಸ ಭಂಡಾರದಲ್ಲಿ ಪಡಿತರ ಪಡೆಯಲು ಗ್ರಾಹಕರು ಹರಸಾಹಸ ಪಡುತ್ತಿದ್ದು, ನೆಟ್ವರ್ಕ್ ಸಮರ್ಪಕವಾಗಿಲ್ಲದ ಹಿನ್ನೆಲೆ ಬೆರಳಚ್ಚು ನೀಡಲು ಸಾಧ್ಯವಾಗುತ್ತಿಲ್ಲ. ದಿನವೊಂದಕ್ಕೆ 4 ರಿಂದ 5 ಮಂದಿಯಿಂದ ಮಾತ್ರ ಬೆರಳಚ್ಚು ಪಡೆಯಲು ಸಾಧ್ಯವಾಗುತ್ತಿದ್ದು, ಉಳಿದವರು ವಾಪಸ್ ತೆರಳುವಂತಾಗಿದೆ. ಇಂತಹ ಕ್ರಮವನ್ನು ತಕ್ಷಣ ರದ್ದುಪಡಿಸಬೇಕೆಂದು ಸಾರ್ವಜನಿಕರು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಮನವಿ ಮಾಡಿದ್ದಾರೆ.
ಇಂತಹ ಅವೈಜ್ಞಾನಿಕ ಕ್ರಮದಿಂದಾಗಿ ಬಡ ಮಂದಿ ತೊಂದರೆ ಅನುಭವಿಸುವಂತಾಗಿದೆ. ಬೆರಳಚ್ಚು ನೀಡಲು ನಾಲ್ಕೈದು ದಿನ ಕಾಯಬೇಕಿದ್ದು, ನಂತರ ಒಂದು ದಿನ ಪಡಿತರ ಪಡೆಯಲು ಮೀಸಲಿಡಬೇಕಿದೆ. ಇದರಿಂದಾಗಿ ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಕೂಲಿ ಕೆಲಸ ಬಿಟ್ಟು ಕಾಯುವಂತಾಗಿದೆ ಎಂದು ಗ್ರಾಮಸ್ಥರಾದ ಅಶೋಕ್, ಧರ್ಮಪ್ಪ, ದೇವಮ್ಮ, ಲಕ್ಷ್ಮಯ್ಯ, ಮುತ್ತಪ್ಪ, ಗೋವಿಂದ ಸೇರಿದಂತೆ ಇತರರು ಶಾಸಕರ ಗಮನ ಸೆಳೆದಿದ್ದಾರೆ.
ಸಚಿವರ ಗಮನಕ್ಕೆ ಸಮಸ್ಯೆ: ಬೆಂಬಳೂರು ಧವಸ ಭಂಡಾರದ ನ್ಯಾಯಬೆಲೆ ಅಂಗಡಿಯಲ್ಲಿ ಈ ತಿಂಗಳು ಬೆರಳಚ್ಚು ಪಡೆಯದೇ ಹಿಂದಿನ ಮಾದರಿಯಂತೆಯೇ ಪಡಿತರ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಿಗೆ ಶಾಸಕ ರಂಜನ್ ಸೂಚಿಸಿದರು.
ತಮ್ಮ ಕಚೇರಿಯಲ್ಲಿ ಸಾರ್ವಜನಿಕರೊಂದಿಗೆ ಮಾತನಾಡಿದ ಶಾಸಕರು, ಈ ಬಗ್ಗೆ ಸಂಬಂಧಿಸಿದ ಇಲಾಖಾ ಸಚಿವರೊಂದಿಗೆ ಮಾತುಕತೆ ನಡೆಸುವದಾಗಿ ಭರವಸೆ ನೀಡಿದರು. ವಿಧಾನ ಸಭಾ ಅಧಿವೇಶನದಲ್ಲಿ ವಿಚಾರ ಪ್ರಸ್ತಾಪಿಸಿ, ಪ್ರತಿ ತಿಂಗಳು ಬೆರಳಚ್ಚು ತೆಗೆದುಕೊಳ್ಳುವ ಕ್ರಮದಿಂದ ಸಾರ್ವಜನಿಕರಿಗೆ ಆಗುವ ತೊಂದರೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವದಾಗಿ ಭರವಸೆ ನೀಡಿದರು.