ಮಡಿಕೇರಿ, ಡಿ. 2: ವಿವಿಧ ಇಲಾಖೆಗಳೊಂದಿಗೆ ಸಂಘ - ಸಂಸ್ಥೆಗಳ ನಡುವಿನ ಕ್ರಿಕೆಟ್ ಪಂದ್ಯಾಟದಲ್ಲಿ ಇಂದು ಜಿಲ್ಲಾ ಪೊಲೀಸ್ ತಂಡ ವಿನ್ನರ್ಸ್ ಟ್ರೋಫಿ ಗೆದ್ದುಕೊಂಡರೆ, ಕೊಡಗು ಪತ್ರಕರ್ತರ ಸಂಘ ರನ್ನರ್ಸ್ ಟ್ರೋಫಿಗೆ ತೃಪ್ತಿ ಪಟ್ಟುಕೊಂಡಿತು.
ಮೊದಲಿಗೆ ಪತ್ರಕರ್ತರ ತಂಡ ಹಾಗೂ ಅರಣ್ಯ ಇಲಾಖೆ ನಡುವಿನ ಪಂದ್ಯಾಟದಲ್ಲಿ ಪತ್ರಕರ್ತರು ಮುನ್ನಡೆ ಸಾಧಿಸಿದರು. ಅತ್ತ ಪೊಲೀಸ್ ತಂಡ ಹಾಗೂ ಕ್ಲಬ್ ಮಹೇಂದ್ರ ತಂಡದ ನಡುವಿನ ಪೈಪೋಟಿಯಲ್ಲಿ ಪೊಲೀಸ್ ತಂಡ ಜಯಗಳಿಸಿತು.
ಅಂತಿಮವಾಗಿ ಪತ್ರಕರ್ತರು ಪೊಲೀಸ್ ತಂಡದ ವಿರುದ್ಧ 55 ರನ್‍ಗಳನ್ನು ಕಲೆ ಹಾಕಿದರೆ, ಈ ಮೊತ್ತವನ್ನು ಬೆನ್ನೇರಿದ ಪೊಲೀಸ್ ತಂಡ ಕೇವಲ 1 ವಿಕೆಟ್ ಕಳೆದು ಕೊಂಡು 56 ರನ್‍ಗಳನ್ನು ದಾಖಲಿಸಿ ವಿಜಯ ಸಾಧಿಸಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ವಿಜೇತರಿಗೆ ಟ್ರೋಫಿ ಯೊಂದಿಗೆ ಬಹುಮಾನ ನೀಡಿದರು.