ಸೋಮವಾರಪೇಟೆ, ಡಿ. 2: ಗೆಳೆಯರ ಬಳಗ ಕನ್ನಡ ಯುವ ವೇದಿಕೆ ಮತ್ತು ಬಾಣಾವರದ ಬಂಡಿಯಮ್ಮ ಯುವಕ ಸಂಘದ ವತಿಯಿಂದ ಬಾಣಾವರ ಜಂಕ್ಷನ್‍ನಲ್ಲಿ ನಿರ್ಮಿಸಲಾದ ಕನ್ನಡ ಧ್ವಜ ಸ್ತಂಭದ ಉದ್ಘಾಟನಾ ಸಮಾರಂಭ ನಡೆಯಿತು.

ಗ್ರಾಮ ಪಂಚಾಯಿತಿ ಸದಸ್ಯ ಶಶಿ ಕುಮಾರ್, ನೂತನ ಧ್ವಜ ಸ್ತಂಭವನ್ನು ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಂದಿರಾ ಗಾಂಧಿ ಅಭಿಮಾನಿ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು ಮಾತನಾಡಿ, ಈಗಾಗಲೇ ಕಾಸರ ಗೋಡು ಕೇರಳಕ್ಕೆ ಸೇರಿ ಹೋಗಿದೆ. ಮುಂದೆಯಾದರೂ ಕನ್ನಡ ನಾಡು ಒಂದಾಗಬೇಕಿದೆ. ಪ್ರತ್ಯೇಕ ರಾಜ್ಯ ಕೇಳುವ ಯತ್ನವನ್ನು ಎಲ್ಲರೂ ವಿರೋಧಿಸಬೇಕೆಂದು ಕರೆ ನೀಡಿದರು. ಸೋಮವಾರಪೇಟೆ ಕರವೇ ನಗರ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಕನ್ನಡ ಗೊತ್ತಿದ್ದರೂ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವದು ವಿಷಾದ. ಕನ್ನಡಿಗರು ಇಂಗ್ಲೀಷಿನಲ್ಲಿ ಮಾತನಾಡುವದೇ ಅಂತಸ್ತು ಎಂದು ಭಾವಿಸಿಕೊಂಡಿದ್ದಾರೆ. ಇಂತಹ ಕೀಳರಿಮೆಯನ್ನು ಬಿಟ್ಟಾಗಲೇ ಕನ್ನಡ ಭಾಷೆ ಉದ್ಧಾರವಾಗುತ್ತದೆ ಎಂದರು.

ಕಾರ್ಯಕ್ರಮದ ಅಂಗವಾಗಿ ಬಸವನಕಲ್ಲಿನಿಂದ ಬಾಣಾವರದವರೆಗೆ ಮಹಿಳೆಯರು ಕಳಸದೊಂದಿಗೆ ಮತ್ತು ಆಟೋ ಚಾಲಕರು ಆಟೋಗ ಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದರು.

ಕಾರ್ಯಕ್ರಮದಲ್ಲಿ ಕರ್ಕಳ್ಳಿ ರವಿ, ಬಂಡಿಯಮ್ಮ ಯುವಕ ಸಂಘ ಅಧ್ಯಕ್ಷ ಚಂದನ್, ಗಣಗೂರು ಗ್ರಾಪಂ ಸದಸ್ಯೆ ಹೇಮಾವತಿ, ಕರವೇ ಪ್ರಮುಖರಾದ ಫ್ರಾನ್ಸಿಸ್ ಡಿಸೋಜಾ, ರವೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ‘ಕುಣಿಯೋಣು ಬಾರಾ’ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.