ಮಡಿಕೇರಿ, ಡಿ. 3 : ನಗರದ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿರುವ ನಗರಸಭಾ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವದು ಸೂಕ್ತವೆಂದು ಅಭಿಪ್ರಾಯಪಟ್ಟಿರುವ ನಗರ ಬಿಜೆಪಿ ಮಹಿಳಾ ಮೋರ್ಚಾ, ಇನ್ನು ಒಂದು ವಾರದೊಳಗೆ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಮಹಿಳಾ ಮೋರ್ಚಾ ಹಾಗೂ ನಗರಸಭಾ ಸದಸ್ಯರಾದ ಸವಿತಾ ರಾಕೇಶ್, ಅಧ್ಯಕ್ಷರ ನಿರ್ಲಕ್ಷ್ಯದಿಂದಾಗಿ ನಗರದ ಎಲ್ಲಾ ವಾರ್ಡ್‍ಗಳಲ್ಲಿ ಅಭಿವೃದ್ದಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಆರೋಪಿಸಿದರು. ಇತ್ತೀಚೆಗೆ ರಸ್ತೆ ವಿಸ್ತರಣೆಗೆ ಬೇಕಾದ ಮಾನದಂಡವನ್ನು ಅನುಸರಿಸದೆ ಸಂಬಂಧಿಸಿದ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡದೆ ದಿಢೀರ್ ಆಗಿ ಕಾರ್ಯಾಚರಣೆ ನಡೆಸಿದ ಹಿನ್ನೆಲೆ ಸ್ಥಾಯಿ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣ ಅವರು ಅಧ್ಯಕ್ಷರ ಏಕ ಪಕ್ಷೀಯ ನಿರ್ಧಾರವನ್ನು ವಿರೋಧಿಸಿದ್ದರು. ಆದರೆ ನಿಯಮ ಉಲ್ಲಂಘಿಸಿದ ಅಧ್ಯಕ್ಷರು ಉಣ್ಣಿಕೃಷ್ಣ ಅವರ ವಿರುದ್ಧ ಉದ್ಘಟತನದ ವರ್ತನೆ ತೋರಿದ್ದಾರೆ ಎಂದು ಟೀಕಿಸಿದರು.

ತಪ್ಪಿನ ಅರಿವಾದ ನಂತರ ಉಪಾಧ್ಯಕ್ಷರು, ನಗರಸಭೆ ಸಿಬ್ಬಂದಿಗಳು ಹಾಗೂ ಮೂಡಾ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಸ್ತೆ ವಿಸ್ತರಣೆಯ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ಬೊಟ್ಟು ಮಾಡಿದರು.

ಮೂಡಾದ ಸಿಡಿಪಿ ನಕಾಶೆ ಪ್ರಕಾರ ರಸ್ತೆ ಕಾಮಗಾರಿ, ತಡೆಗೋಡೆ, ಚರಂಡಿ, ನೀರಿನ ಪೈಪ್‍ಗಳ ಸಂಪರ್ಕ ವ್ಯವಸ್ಥೆಗಳಿಗೆ ಹತ್ತು ಕೋಟಿ ರೂ. ಗಳು ಬೇಕಾಗುತ್ತದೆ. ಆದರೆ ಇಷ್ಟೊಂದು ಹಣ ನಗರಸಭೆಯಲ್ಲಿ ಲಭ್ಯವಿಲ್ಲ ದಿದ್ದರೂ ರಸ್ತೆ ವಿಸ್ತರಣೆಗೆ ಮುಂದಾಗಿರುವದು ಖಂಡನೀಯ ವೆಂದು ಸವಿತಾ ರಾಕೇಶ್ ತಿಳಿಸಿದರು.

ನಗರಸಭಾ ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದ್ದು, ಈ ಬಗ್ಗೆ ಅಧ್ಯಕ್ಷರು ಯಾವದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಸರ್ಕಾರದ ಬಳಿ ನಿಯೋಗ ತೆರಳುವಂತೆ ಹಲವು ಸಭೆಗಳಲ್ಲಿ ಸಲಹೆ ನೀಡಿದ್ದರೂ ಇಲ್ಲಿಯವರೆಗೆ ನಿಯೋಗ ವನ್ನು ಕರೆದೊಯ್ಯಲಿಲ್ಲ. ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಂಗಡಿಸುವ ಯಂತ್ರೋಪಕರಣ ದುರಸ್ತಿಗೀಡಾಗಿ ದ್ದರೂ ಅಧ್ಯಕ್ಷರು ವೈಜ್ಞಾನಿಕ ರೂಪದ ಕಸ ವಿಲೇವಾರಿಗೆ ಕ್ರಮ ಕೈಗೊಂಡಿಲ್ಲ ಎಂದರು. ಮತ್ತೊಬ್ಬ ನಗರಸಭೆ ಸದಸ್ಯೆ ಶಿವಕುಮಾರಿ ಮಾತನಾಡಿ, ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವದೇ ಸೂಕ್ತ ಎಂದರು. ಸುದ್ದಿಗೋಷ್ಠಿಯಲ್ಲಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಕನ್ನಿಕಾ ದಿನೇಶ್, ಸಾಂಸ್ಕøತಿಕ ಘಟಕದ ಅಧ್ಯಕ್ಷೆ ಭಾರತಿ ರಮೇಶ್, ನಗರಸಭಾ ಸದಸ್ಯೆ ಲಕ್ಷ್ಮೀ ಕುಟ್ಟಪ್ಪ ಹಾಗೂ ಗೌರಮ್ಮ ಉಪಸ್ಥಿತರಿದ್ದರು.