ಸೋಮವಾರಪೇಟೆ, ಡಿ. 2: ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಕನ್ನಡ ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ್ ಕರೆ ನೀಡಿದರು.

ಇಲ್ಲಿನ ಸಂತ ಜೋಸೆಫರ ಸಮೂಹ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ, ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ನಾಡು ನುಡಿಯ ಬೆಳವಣಿಗೆಗೆ ಪ್ರತಿಯೋರ್ವರೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದ ಅವರು, ಕನ್ನಡ ಸಾಹಿತ್ಯ ಪರಿಷತ್‍ನ ಸಾಹಿತ್ಯಪರ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸು ವಂತಾಗಬೇಕು ಎಂದರು.

ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಫಾ. ರಾಯಪ್ಪ ಮಾತನಾಡಿ, ಪ್ರತಿಯೋರ್ವ ಕನ್ನಡಿಗನೂ ಭಾಷಾ ಭಿಮಾನದೊಂದಿಗೆ ದೇಶಾಭಿಮಾನ ಮೈಗೂಡಿಸಿಕೊಳ್ಳಬೇಕು. ಸಾಮಾಜಿಕ ಚಿಂತನೆಗಳ ಮೂಲಕ ಸಮಾಜ ಮುಖಿಯಾಗಿ ಮುಂದುವರೆಯ ಬೇಕೆಂದು ತಿಳಿಸಿದರು. ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ 125 ಅಂಕಗಳಿಸಲು ಶ್ರಮಿಸಿದ ಶಾಲಾ ಶಿಕ್ಷಕರುಗಳಾದ ಸನತ್ ಮತ್ತು ಸುಜಾತಾ ಅವರುಗಳನ್ನು ಕಸಾಪ ವತಿಯಿಂದ ಸನ್ಮಾನಿಸ ಲಾಯಿತು. ಕಾರ್ಯಕ್ರಮದಲ್ಲಿ ಫಾ. ಟೆನ್ನಿ ಕುರಿಯನ್, ಅಂತೋಣಿ ರಾಜ್, ಮುಖ್ಯ ಶಿಕ್ಷಕಿ ಮಾರ್ಗರೇಟ್, ಪ್ರಾಂಶುಪಾಲ ಥಾಮಸ್, ಮುಖ್ಯಶಿಕ್ಷಕ ಹ್ಯಾರಿ ಮೋರಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.