ಸಿದ್ದಾಪುರ, ಡಿ.3: ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಒಳಪಡುವ ಗುಹ್ಯ ಗ್ರಾಮದ ಕೂಡುಗದ್ದೆ ರಸ್ತೆಯು ತೀವ್ರವಾಗಿ ಹದಗೆಟ್ಟಿದ್ದು, ರಸ್ತೆಯನ್ನು ದುರಸ್ತಿ ಪಡಿಸಬೇಕೆಂದು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿ ಸಿ.ಪಿ.ಐ.(ಎಂ) ಪಕ್ಷದ ವತಿಯಿಂದ ಸಿದ್ದಾಪುರ ಗ್ರಾ,ಪಂ ಕಚೇರಿಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡ ಎನ್.ಡಿ. ಕುಟ್ಟಪ್ಪ ಮಾತನಾಡಿ ಗುಹ್ಯ ಗ್ರಾಮದ ಕೂಡುಗದ್ದೆ ರಸ್ತೆಯು ಸೇರಿದಂತೆ ಬಹುತೇಕ ರಸ್ತೆಗಳು ತೀವ್ರವಾಗಿ ಹದಗೆಟ್ಟಿದ್ದು ವಾಹನ ಸಂಚರಿಸಲು ಸಾಧ್ಯವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಇದಲ್ಲದೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಇದ್ದರೂ ಕೂಡ ಪಂಚಾಯಿತಿ ಆಡಳಿತ ಮಂಡಳಿ ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂದು ದೂರಿದರು. ಮೂಲಭೂತ ಸೌಕರ್ಯಗಳನ್ನು ಕೂಡಲೇ ಒದಗಿಸಿಕೊಡದಿದ್ದಲ್ಲಿ ಗ್ರಾಮಸ್ಥರನ್ನು ಒಗ್ಗೂಡಿಸಿ ಉಗ್ರ ಹೋರಾಟವನ್ನು ಮಾಡಲಾಗುವದೆಂದು ಕುಟ್ಟಪ್ಪ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಪಕ್ಷದ ಮುಖಂಡ ಹೆಚ್.ಬಿ. ರಮೇಶ್ ಮಾತನಾಡಿದರು. ಪ್ರತಿಭಟನೆಯಲ್ಲಿ ಸಿ.ಪಿ.ಐ.(ಎಂ) ಪಕ್ಷದ ಅನಿಲ್‍ಕುಟ್ಟಪ್ಪ, ಮುಸ್ತಾಫ, ಸಾಲಿ ಪೌಲಾಸ್, ಮೊಯ್ದು ಹಾಗೂ ಗ್ರಾಮಸ್ಥರು ಹಾಜರಿದ್ದರು.