ಸೋಮವಾರಪೇಟೆ,ಡಿ.2: ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಹೈಟೆಕ್ ಮಾರುಕಟ್ಟೆ ಇದೀಗ ಜೂಜು ಅಡ್ಡೆಯಾಗಿ ಮಾರ್ಪಟ್ಟಿದೆ. ಸೋಮವಾರದಂದು ಮಾತ್ರ ಇಲ್ಲಿ ಸಂತೆ ನಡೆದರೆ ವಾರದ ಉಳಿದ ದಿನಗಳಲ್ಲಿ ಇಲ್ಲಿ ಜೂಜು ನಿರಾತಂಕವಾಗಿ ಸಾಗುತ್ತಿದೆ.
ಸೋಮವಾರಪೇಟೆ ಪೊಲೀಸ್ ಠಾಣೆಯಿಂದ ಕೂಗಳತೆಯ ದೂರದಲ್ಲಿರುವ ಮಾರುಕಟ್ಟೆಯಲ್ಲಿ ಕಳೆದ ಎರಡು ತಿಂಗಳಿನಿಂದಲೂ ಅವ್ಯಾಹತವಾಗಿ ಕವಡೆ, ಇಸ್ಪೀಟ್ ಸೇರಿದಂತೆ ಇತರ ಜೂಜು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮಾತ್ರ ಗಾಢ ನಿದ್ರೆಗೆ ಜಾರಿದಂತಿದೆ. ಪಟ್ಟಣದ ಹೃದಯ ಭಾಗದಲ್ಲೇ ಜೂಜು ಕೇಂದ್ರ ತಲೆ ಎತ್ತಿದ್ದರೂ ಇಲಾಖೆ ಮಾತ್ರ ಜಾಣ ಮೌನಕ್ಕೆ ಶರಣಾಗಿರುವದು ಸಂಶಯಕ್ಕೆ ಎಡೆ ಮಾಡಿದೆ.
ಕಳೆದ ಎರಡು ತಿಂಗಳಿನಿಂದ ಪ್ರತಿನಿತ್ಯ ಈ ಮಾರುಕಟ್ಟೆಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ಜೂಜಾಟ ನಡೆಯುತ್ತಿದೆ. ಈ ಬಗ್ಗೆ ಹಲವಷ್ಟು ಬಾರಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರೂ ಯಾವದೇ ಕಡಿವಾಣ ಬಿದ್ದಿಲ್ಲ ಎಂದು ಸಾರ್ವಜನಿಕರು ಇಲಾಖೆಯ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಸೋಮವಾರದ ಸಂತೆಗೆ ಭಾನುವಾರದಂದು ಸಂಜೆಯೇ ವ್ಯಾಪಾರಸ್ಥರು ಮಾರುಕಟ್ಟೆಗೆ ಆಗಮಿಸಿ ಅಂಗಡಿ ಮುಂಗಟ್ಟುಗಳನ್ನು ಜೋಡಿಸಿಕೊಳ್ಳುತ್ತಾರೆ. ಈ ಸಂದರ್ಭವೂ ಸಹ ಜೂಜು ಆಟಗಾರರು ಯಾವದೇ ಅಂಜಿಕೆಯಿಲ್ಲದೇ, ಆಟದಲ್ಲಿ ನಿರತರಾಗಿರುತ್ತಾರೆ. ಇದರೊಂದಿಗೆ ಅವಾಚ್ಯ ಪದಗಳನ್ನು ಬಳಸುವ ಮೂಲಕ ಮಹಿಳಾ ವ್ಯಾಪಾರಸ್ಥರಿಗೂ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ದಿನನಿತ್ಯ ಬೆಳಗ್ಗಿನಿಂದ ಸಂಜೆಯವರೆಗೂ ನಡೆಯುವ ಜೂಜಾಟಕ್ಕೆ ಪೊಲೀಸರೇ ಸಾಥ್ ನೀಡಿದ್ದಾರೆಯೇ? ಎಂಬ ಸಂಶಯ ಮೂಡುವಂತೆ ಮಾಡಿದೆ. ಪ್ರತಿದಿನ ಕನಿಷ್ಟ 20 ರಿಂದ 30 ಮಂದಿ ಜೂಜಾಟದಲ್ಲಿ ತೊಡಗಿಕೊಳ್ಳುತ್ತಿದ್ದು, ಕೆಲವೊಮ್ಮೆ ಕಾಲೇಜು ವಿದ್ಯಾರ್ಥಿಗಳೂ ಸಹ ಜೂಜಿಗೆ ಜೋತು ಬಿದ್ದಿರುತ್ತಾರೆ ಎಂದು ಸಮೀಪದ ವರ್ತಕರು ಆರೋಪಿಸಿದ್ದಾರೆ. ಇನ್ನಾದರೂ ಸೋಮವಾರಪೇಟೆ ಪೊಲೀಸರು ಇಂತಹ ಜೂಜು ಅಡ್ಡೆಗಳಿಗೆ ಕಡಿವಾಣ ಹಾಕುತ್ತಾರೆಯೇ? ಎಂಬದನ್ನು ಕಾದುನೋಡಬೇಕಿದೆ.