*ಸಿದ್ದಾಪುರ, ಡಿ. 4: ರತ್ನಾ ಕಮರ್ಷಿಯಲ್ ಗ್ರೂಪ್ ಎಂಬ ಖಾಸಗಿ ಸಂಸ್ಥೆಗೆ ವರ್ಷಗಳ ಹಿಂದೆ ಹೊಸ್ಕೇರಿ ಗ್ರಾಮದಲ್ಲಿ 89 ಏಕರೆ ಕೃಷಿ ಭೂಮಿಯನ್ನು ಖರೀದಿಸಿ ವಾಣಿಜ್ಯ ಬಳಕೆ ಮತ್ತು ಭೂಪರಿವರ್ತನೆ ಮಾಡಿಕೊಳ್ಳಲು ನಿರಕ್ಷೇಪಣಾ ಪತ್ರಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ, ಹೊಸ್ಕೇರಿ ಮತ್ತು ಅರೆಕಾಡಿನ ಕಾಫಿ ಬೆಳೆಗಾರರು ಮತ್ತು ಗ್ರಾಮಸ್ಥರು ಯಾವದೇ ಕಾರಣಕ್ಕೂ ನಿರಕ್ಷೇಪಣಾ ಪತ್ರ ನೀಡಬಾರದೆಂದು ಗ್ರಾಮಾಡಳಿತಕ್ಕೆ ಅನೇಕ ಬಾರಿ ಅರ್ಜಿ ಸಲ್ಲಿಸಿ ಒತ್ತಾಯಿಸಿದ್ದರು.

ಹೀಗಿದ್ದರೂ, ಹೊಸ್ಕೇರಿ ಗ್ರಾಮ ಪಂಚಾಯತ್ ಆಡಳಿತ ಗ್ರಾಮಸ್ಥರಿಗೆ ತಿಳಿಸದೇ, ನಿಯಮಾನುಸಾರ ಗ್ರಾಮ ಸಭೆಯಲ್ಲಿ ಮಂಡಿಸದೆ ಮತ್ತು ನೋಟೀಸ್ ಜಾರಿ ಮಾಡದೇ ಗೌಪ್ಯವಾಗಿ ನಿರಕ್ಷೇಪಣಾ ಪತ್ರ ನೀಡಿದೆ ಎಂದು ಆರೋಪಿಸಿ ಆಡಳಿತದ ವಿರುದ್ಧ ಕಿಡಿಕಾರಿದ ಇಲ್ಲಿನ ಕಾಫಿ ಬೆಳೆಗಾರರು ಗ್ರಾಮಾಡಳಿತ ಗೌಪ್ಯವಾಗಿ ನೀಡಿರುವ ನಿರಕ್ಷೇಪಣಾ ಪತ್ರವನ್ನು ಅನೂರ್ಜಿತಗೊಳಿಸಬೇಕು ಎಂದು ಒತ್ತಾಯಿಸಿ ಇಂದು ಆಯೋಜನೆಗೊಂಡಿದ್ದ ಗ್ರಾಮ ಸಭೆಯನ್ನು ಸ್ಥಗಿತಗೊಳಿಸಿದರು.

ಗ್ರಾಮದಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಆಹ್ವಾನಿಸಲಾಗಿದ್ದ ಗ್ರಾಮ ಸಭೆಯ ಪ್ರಾರಂಭದÀಲ್ಲಿಯೇ ಆಡಳಿತವನ್ನು ಪೇಚಿಗೆ ಸಿಲುಕಿಸಿದ ಗ್ರಾಮಸ್ಥರು ಮೊದಲು ರತ್ನಾ ಕಮರ್ಷಿಯಲ್ ಗ್ರೂಪ್‍ಗೆ ಹೇಗೆ ಗೌಪ್ಯವಾಗಿ ನಿರಕ್ಷೇಪಣಾ ಪತ್ರ ನೀಡಿದ್ದೀರಿ ಎಂದು ಉತ್ತರಿಸಿ ನಂತರ ಸಭೆ ನಡೆಸಿ, ಗ್ರಾಮವನ್ನು ನಾಶ ಮಾಡುವ ಯಾವದೇ ಅಭಿವೃದ್ಧಿ ಕೆಲಸಗಳು ಇಲ್ಲಿ ನಡೆಯುವದು ಬೇಡ ಮತ್ತು ಚರ್ಚಿಸುವದು ಬೇಡ ಎಂದು ಒತ್ತಾಯಿಸಿದರು.

ಈ ಸಂದರ್ಭ ಗ್ರಾಮಾಭಿವೃದ್ಧಿ ಅಧಿಕಾರಿ ಉಭಯ ಕಡೆಯವರನ್ನು ಕರೆದು ಮಾತುಕತೆ ನಡೆಸಿ ನಂತರ ನಿರಕ್ಷೇಪಣಾ ಪತ್ರದ ಬಗ್ಗೆ ಚರ್ಚಿಸೋಣ ಎಂದು ಹೇಳಿದಾಕ್ಷಣ ಸಿಡಿಮಿಡಿಗೊಂಡ ಸುನೀಲ್, ಸುಭಾಷ್ ಹಾಗೂ ಇತರರು ಪಂಚಾಯತ್ ಆಡಳಿತ ಏನು ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದೆಯೇ, ಗ್ರಾಮಸ್ಥರಿಗೆ ಅಗತ್ಯವಿಲ್ಲದೇ ಇರುವದರ ಬಗ್ಗೆ ಆಡಳಿತ ಯಾವ ಉದ್ದೇಶದಿಂದ ಉತ್ಸಾಹ ತೋರುತ್ತಿದೆ ಎಂದು ಪ್ರಶ್ನಿಸಿದರು.

ಅರೆಕಾಡಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಭೆ ಪ್ರಾರಂಭ ಗೊಂಡರೂ ನಂತರ ಸಭೆಯನ್ನು ಮುಂದೂಡಲಾಗಿದೆ ಎಂದು ಎಲ್ಲರೂ ಗ್ರಾಮ ಪಂಚಾಯತ್ ಕಚೇರಿಗೆ ತೆರಳಿ ನಿರ್ಣಯ ಬರೆಸಿದ ಬೆಳವಣಿಗೆ ಕೂಡ ನಡೆಯಿತು.

-ಅಂಚೆಮನೆ ಸುಧಿ