ಕೂಡಿಗೆ, ಡಿ. 4: ಕೂಡಿಗೆಯ ಕಾರ್ಪೊರೇಷನ್ ಬ್ಯಾಂಕ್ ಸಹೋದ್ಯೋಗಿ ತರಬೇತಿ ಕೇಂದ್ರದ ಆವರಣದಲ್ಲಿ ಕೃಷಿ ಇಲಾಖೆಯ ವತಿಯಿಂದ ರೈತ ಹಿಡುವಳಿದಾರರಿಗೆ ಮಣ್ಣು ಪರೀಕ್ಷಾ ಚೀಟಿಯನ್ನು ಕೊಡಗು-ಮೈಸೂರು ಸಂಸದ ಪ್ರತಾಪ್‍ಸಿಂಹ ಅವರು ವಿತರಿಸಿದರು.

ಬಳಿಕ ಮಾತನಾಡಿದ ಸಂಸದ ಪ್ರತಾಪ್‍ಸಿಂಹ, ಜಿಲ್ಲೆಯ ರೈತರುಗಳು ತಮ್ಮ ಜಮೀನಿನ ಮಣ್ಣನ್ನು ಪರೀಕ್ಷಿಸಿಕೊಂಡ ನಂತರ ಅದಕ್ಕನುಗುಣವಾಗಿ ಗೊಬ್ಬರವನ್ನು ಹಾಕಲು ಅನುಕೂಲವಾಗುವದು. ಅವರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಕೇಂದ್ರ ಪರಿಷತ್ ರಾಷ್ಟ್ರೀಯ ಸಮಗ್ರ ಮಣ್ಣು ಆರೋಗ್ಯ ಅಭಿಯಾನದಡಿಯಲ್ಲಿ ವಿತರಣೆ ಮಾಡಲಾಯಿತು. ಈ ಸಂದರ್ಭ ತಾಲೂಕು ಸಹಾಯಕ ನಿರ್ದೇಶಕ ರಾಜಶೇಖರ್ ಮಣ್ಣು ಪರೀಕ್ಷೆ ಬಗ್ಗೆ ಮಾಹಿತಿ ನೀಡಿ, ನಂತರ ಜಿಲ್ಲೆಯ 3 ತಾಲೂಕುಗಳ ರೈತರು ಕೂಡಿಗೆಯಲ್ಲಿರುವ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಮಣ್ಣನ್ನು ಪರೀಕ್ಷಿಸಿಕೊಳ್ಳಲು ಸಲಹೆ ನೀಡಿದರು. ಈ ಘಟಕದಲ್ಲಿ ಮಣ್ಣಿನ 12 ಘಟಕಗಳ ಪರೀಕ್ಷೆಯನ್ನು ಸಕಾಲದಲ್ಲಿ ಮಾಡಿಕೊಡಲಾಗುವದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಶ್ರೀವಿದ್ಯಾ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮಿ, ಜಿ.ಪಂ. ಸದಸ್ಯರಾದ ಶ್ರೀನಿವಾಸ್, ಮಂಜುಳಾ, ತಾ.ಪಂ. ಸದಸ್ಯೆ ಸಬಿತಾ ಚೆನ್ನಕೇಶವ, ಕೃಷಿ ಇಲಾಖೆಯ ನಿರ್ದೇಶಕ ರಾಜು, ತಾಲೂಕು ಸಹಾಯಕ ನಿರ್ದೇಶಕ ಹೆಚ್.ಎಸ್. ರಾಜಶೇಖರ್, ರೈತ ಸಂಪರ್ಕ ಕೇಂದ್ರದ ಪುಟ್ಟಯ್ಯ, ಶಾರದಾ ಹಾಗೂ ರೈತರು ಇದ್ದರು.