ಶ್ರೀಮಂಗಲ, ಡಿ. 4: ರಾಜ್ಯ ಸರಕಾರ ರೈತರ ಸಾಲಮನ್ನಾ ಘೋಷಿಸಿದ್ದು, ಆದರೆ ಸರ್ಕಾರ ವಿಧಿಸಿರುವ ಮಾನದಂಡದಂತೆ ಬಹುತೇಕ ರೈತರು ಈ ಸೌಲಭ್ಯದಿಂದ ವಂಚಿತರಾಗಲಿದ್ದಾರೆ. ಸಾಲಮನ್ನಾದ ನಿಯಮಾವಳಿ ಬಹಳಷ್ಟು ಗೊಂದಲಕಾರಿಯಾಗಿದೆ. ಸರಕಾರ ಈ ಬಗ್ಗೆ ಕೂಡಲೇ ಎಲ್ಲಾ ರೈತರಿಗೆ ಸಾಲ ಮನ್ನಾದ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಂಡು ಶೀಘ್ರ ಸಾಲ ಮನ್ನಾದ ಸೌಲಭ್ಯ ಅನುಷ್ಠಾನ ಗೊಳಿಸಬೇಕೆಂದು ಕೊಡಗು ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ. ಸಾಲಮನ್ನಾ ಸೇರಿದಂತೆ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳನ್ನು ಬೆಳೆಗಾರರ ನಿಯೋಗ ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಗೋಣಿಕೊಪ್ಪ ಸಿಲ್ವರ್ ಸ್ಕೈ ಹೊಟೇಲ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಕೈಬುಲಿರ ಹರೀಶ್‍ಅಪ್ಪಯ್ಯ ಅವರ ಆಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು.

ರಾಜ್ಯ ಸರಕಾರ ಘೋಷಿಸಿರುವ ರೈತರ ಸಾಲಮನ್ನಾ ವಿಚಾರದ ಬಗ್ಗೆ ಸಹಕಾರ ಸಂಘದ ಬ್ಯಾಂಕುಗಳಲ್ಲಿ ಬಿ.ಪಿ.ಎಲ್ ಕಾರ್ಡ್ ಇಲ್ಲದರ ಬಗ್ಗೆ ರೈತರಿಂದ ಪ್ರಮಾಣ ಪತ್ರ ಕೇಳಲಾಗಿದೆ. ಪ್ರಮಾಣ ಪತ್ರ ಸಲ್ಲಿಸಿದ ಅರ್ಜಿಗಳು ಆನ್‍ಲೈನ್‍ನಲ್ಲಿ ತಿರಸ್ಕøತವಾಗುತ್ತಿದೆ. ಆರ್.ಟಿ.ಸಿ.ಯಲ್ಲಿ ರೈತ ಕುಟುಂಬದ ಸದಸ್ಯರ ಹೆಸರಿದ್ದು, ಅದರಲ್ಲಿ ಓರ್ವ ಸಾಲ ಪಡೆದಿದ್ದರೆ ಅಂತಹವರ ಅರ್ಜಿಯೂ ಸಹ ತಿರಸ್ಕøತವಾಗುತ್ತಿದೆ. ಹೀಗಾದರೆ ಸಾಲ ಮನ್ನಾದ ಸೌಲಭ್ಯದಿಂದ ಬಹುತೇಕ ರೈತ ಸಮುದಾಯ ವಂಚಿತವಾಗಲಿದ್ದಾರೆ ಎಂದು ಆತಂಕ ವ್ಯಕ್ತವಾಯಿತು.

ಬ್ಯಾಂಕ್‍ಗಳಲ್ಲಿ ರೈತರು ಸಾಲ ಪಡೆದು ಸಾಲದ ಬಡ್ಡಿಯನ್ನು ಪ್ರತೀ ಮೂರು ತಿಂಗಳಿಗೊಮ್ಮೆ ಕಟ್ಟುವ ಮೂಲಕ ಸಾಲ ನವೀಕರಣ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಬಡ್ಡಿ ಕಟ್ಟದಿದ್ದರೆ ಎನ್.ಪಿ.ಎ. ಆಗುತ್ತಿದೆ. (ಮೊದಲ ಪುಟದಿಂದ) ಕೊಡಗಿನಲ್ಲಿ ಕಾಫಿ, ಕರಿಮೆಣಸು ವಾರ್ಷಿಕ ಬೆಳೆಯಾಗಿದ್ದು, ವಾರ್ಷಿಕ ಆದಾಯ ಬರುತ್ತದೆ. ಮೂರು ತಿಂಗಳಿಗೊಮ್ಮೆ ಸಾಲ ನವೀಕರಣ ಮಾಡುವದು ಸಾಧ್ಯವಾಗುವದಿಲ್ಲ. ಈ ಬಗ್ಗೆ ಲೀಡ್ ಬ್ಯಾಂಕ್ ಮತ್ತು ಜಿಲ್ಲಾಧಿಕಾರಿಯವರು ಸರಕಾರಕ್ಕೆ ಸೂಕ್ತ ಮಾಹಿತಿ ನೀಡಬೇಕೆಂದು ಒತ್ತಾಯಿಸಲು ನಿರ್ಧರಿಸಲಾಯಿತು.

ಬ್ಯಾಂಕ್‍ಗಳಲ್ಲಿ ಒಂದೇ ಬಾರಿ ಸಾಲ ಮರುಪಾವತಿ (ಓಟಿಎಸ್) ಸೌಲಭ್ಯಕ್ಕೆ ಒಳಪಟ್ಟ ರೈತರಿಗೆ ಸಂಬಂಧಿಸಿದ ಬ್ಯಾಂಕ್ ಹಾಗೂ ಇತರ ಬ್ಯಾಂಕ್ ಸಾಲ ನೀಡದಂತೆ ನಿಯಮ ಜಾರಿ ಮಾಡಿವೆ. ಓಟಿಎಸ್ ಹಾಗೂ ಎನ್.ಪಿ.ಎ ಆದ ರೈತರ ಹೆಸರಿನಲ್ಲಿ ಸಿಬಿಲ್ ರಿಪೋರ್ಟ್ ಹಾಕುವ ಮೂಲಕ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಯಲ್ಲಿ ಸಾಲ ದೊರೆಯದಂತೆ ನಿಯಮ ಜಾರಿ ಮಾಡಿರುವದು ರೈತರಿಗೆ ತೀವ್ರ ಸಂಕಷ್ಟ ಉಂಟು ಮಾಡಿದೆ. ಇಂತಹ ನಿಯಮಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಲಾಯಿತು.

ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ರೈತ ಕುಟುಂಬಗಳಿಗೆ ದೊರೆಯುತ್ತಿದ್ದ ಯಶಸ್ವಿನಿ ಆರೋಗ್ಯ ವಿಮೆಯನ್ನು ಕೇಂದ್ರ ಸರಕಾರದ ಆಯುಷ್ಮಾನ್ ಆರೋಗ್ಯ ವಿಮೆಯೊಂದಿಗೆ ವಿಲೀನ ಮಾಡಲಾಗಿದೆ. ಇದರಿಂದ ಯಶಸ್ವಿನಿ ಯೋಜನೆಯಲ್ಲಿ ಸೌಲಭ್ಯ ಪಡೆಯುತ್ತಿದ್ದ ಬಹುತೇಕ ರೈತ ಕುಟುಂಬಗಳು ಹೊಸ ವಿಮೆ ಯೋಜನೆಯಿಂದ ವಂಚಿತರಾಗಿದ್ದಾರೆ. ಆದರೆ ಈ ಯೋಜನೆಯ ನಿಯಮಾವಳಿಯಂತೆ ಬಿ.ಪಿ.ಎಲ್. ಕಾರ್ಡು ಹೊಂದಿರುವ ರೈತರಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ ಇದನ್ನು ಎಲ್ಲಾ ರೈತರಿಗೂ ದೊರೆಯುವಂತೆ ನಿಯಮಾವಳಿಯನ್ನು ರೂಪಿಸುವಂತೆ ಒತ್ತಾಯಿಸಲು ನಿರ್ಧರಿಸಲಾಯಿತು.

ಉತ್ತರ ಕೊಡಗಿನಲ್ಲಿ ಪ್ರಾಕೃತಿಕ ದುರಂತಕ್ಕೆ ತುತ್ತಾದ ಸಂತ್ರಸ್ತರಿಗೆ ಸರಕಾರ ಕೂಡಲೇ ಪುನರ್ವಸತಿ ಕಲ್ಪಿಸಿ ನಷ್ಟಗೊಂಡಿರುವ ಕೃಷಿ ಭೂಮಿಗೆ ಸೂಕ್ತ ಪರಿಹಾರ ನೀಡಬೇಕು. ಕೊಡಗು ಸಂತ್ರಸ್ತರಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಬಂದಿರುವ ದೇಣಿಗೆ ಸಂತ್ರಸ್ತರಿಗೆ ಮಾತ್ರ ವಿನಿಯೋಗಿಸಬೇಕು. ಕೆಲವು ದೃಶ್ಯ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮ ಕೊಡಗು ಸಂತ್ರಸ್ತರಿಗಾಗಿ ಸಂಗ್ರಹಿಸಿದ ನಿಧಿಯ ಬಗ್ಗೆ ಪಾರದರ್ಶಕವಾಗಿ ಜಿಲ್ಲೆಯ ಸಂತ್ರಸ್ತರಿಗಾಗಿ ವಿನಿಯೋಗಿಸಬೇಕು. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಯಿತು.

ಪ್ರಸಕ್ತ ವರ್ಷದ ಅತಿವೃಷ್ಠಿಗೆ ತುತ್ತಾಗಿ ಜಿಲ್ಲೆಯ ಕಾಫಿ, ಕರಿಮೆಣಸು ಇತ್ಯಾದಿ ಫಸಲು ನಾಶವಾಗಿದ್ದು, ಸರಕಾರ ಆದಷ್ಟು ಬೇಗ ಪರಿಹಾರ ವಿತರಿಸಬೇಕು. ಅಲ್ಲದೆ ಈ ಹಿಂದಿನ ಸಾಲಿನ ಪರಿಹಾರ ಬಾಕಿ ಇರುವದನ್ನು ಸಹ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲಾಯಿತು.

ದಕ್ಷಿಣ ಕೊಡಗಿನ ಕೂಟಿಯಾಲ ಮೂಲಕ ಬಾಡಗರಕೇರಿ ಬಿ-ಶೆಟ್ಟಿಗೇರಿ ಸಂಪರ್ಕ ರಸ್ತೆ ನಡುವೆ ಸೇತುವೆ ನಿರ್ಮಾಣವಾಗಿ ಎರಡು ದಶಕಗಳೇ ಕಳೆದಿದ್ದರೂ ಇದರ ಸಂಪರ್ಕಕ್ಕೆ ಉಂಟಾಗಿರುವ ಅಡೆತಡೆಯನ್ನು ನಿವಾರಿಸಿ ಜನರ ಪ್ರಯೋಜನಕ್ಕೆ ಲಭ್ಯವಾಗುವಂತೆ ಮಾಡಲು ಮುಂದಿನ ಕಾರ್ಯ ಯೋಜನೆಯಲ್ಲಿ ಕೈಗೆತ್ತಿಗೊಳ್ಳಲು ನಿರ್ಧರಿಸಲಾಯಿತು.

ತಾ. 8 ರಂದು ಮಡಿಕೇರಿಯಲ್ಲಿ ಕೊಡಗು ಮಾರಕ ಯೋಜನೆ ವೇದಿಕೆ ನೇತೃತ್ವದಲ್ಲಿ ಚತುಷ್ಪತ ರಸ್ತೆ ಹಾಗೂ ರೈಲ್ವೆ ಯೋಜನೆಯನ್ನು ವಿರೋಧಿಸಿ ನಡೆಯುವ ರ್ಯಾಲಿಗೆ ಬೆಳೆಗಾರರ ಒಕ್ಕೂಟದಿಂದ ಬೆಂಬಲ ನೀಡುವಂತೆ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಬೆಳೆಗಾರರ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ, ಜಿ.ಪಂ. ಮಾಜಿ ಅಧ್ಯಕ್ಷೆ ಶರೀನ್‍ಸುಬ್ಬಯ್ಯ, ಒಕ್ಕೂಟದ ಉಪಾಧ್ಯಕ್ಷ ಕೇಚಂಡ ಕುಶಾಲಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್‍ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದೇವಯ್ಯ, ಖಜಾಂಚಿ ಮಾಣೀರ ವಿಜಯ್‍ನಂಜಪ್ಪ, ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶೆರಿಸುಬ್ಬಯ್ಯ, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್‍ಮಾದಪ್ಪ, ಪ್ರಮುಖರಾದ ಬೊಳ್ಳೆರ ಪೊನ್ನಪ್ಪ, ಎ.ಎ. ಸತೀಶ್‍ದೇವಯ್ಯ, ತೀತೀರ ಊರ್ಮಿಳಾ, ಎ.ಬಿ. ಮುತ್ತಣ್ಣ, ಮೀದೇರಿರ ಕವಿತಾ, ಅಣ್ಣಳಮಾಡ ಗಿರೀಶ್, ಕರ್ತಮಾಡ ಸುನಂದ, ಕಾಳಿಮಾಡ ರಶಿಕ್, ರಂಜಿಕುಟ್ಟಯ್ಯ, ಎ.ಎಸ್. ನಂಜಪ್ಪ್ಯ, ರತ್ನ ಪೂವಯ್ಯ, ಐಚೆಟ್ಟಿರ ಸುಬ್ಬಯ್ಯ, ಎ.ಎ. ಮೋಟಯ್ಯ, ಸುಮಿಸುಬ್ಬಯ್ಯ, ಕೆ.ಎನ್. ಮುತ್ತಣ್ಣ, ಚೇಂದಂಡ ಸುನಿತಾ, ಪಿ.ಬಿ. ಕಾರ್ಯಪ್ಪ ಅವರು ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.