ಸಿದ್ದಾಪುರ, ಡಿ. 4: ಅವರೆಗುಂದ ಗ್ರಾಮದ ಪೋಷಕರೊಬ್ಬರಿಗೆ ಪ್ರೀತಿಯ ಮಗನನ್ನು ಅಕ್ಕರೆಯಿಂದ ಪೋಷಿಸಲು ಅನಿವಾರ್ಯ ವಾಗಿ ಮಗನ ಕಾಲಿಗೆ ಸರಪಳಿ ಕಟ್ಟಿ ಯೋಗಕ್ಷೇಮ ನೋಡಿ ಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.ಅವರೆಗುಂದ ಗ್ರಾಮದ ಬಡ ದಂಪತಿಗಳಾದ ಹೆಚ್.ಪಿ. ಹರೀಶ್ ಮತ್ತು ಲೀಲಾವತಿ ದಂಪತಿಗಳ ಮೂವರು ಮಕ್ಕಳಲ್ಲಿ ಕೊನೆಯ ಮಗ ಪ್ರವೀಣ್(13) ಬುದ್ಧಿಮಾಂದ್ಯನಾಗಿ ಸರಪಳಿಯಲ್ಲಿ ಬಂಧಿಯಾಗಿ ಬಾಲ್ಯಾವಸ್ಥೆಯನ್ನು ಕಳೆಯುತ್ತಿರುವ ನತದೃಷ್ಟ ಬಾಲಕ. ಈ ಪೋಷಕರ ಇಬ್ಬರು ಹೆಣ್ಣು ಮಕ್ಕಳು ಮರಗೋಡಿನ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇರುವ ಓರ್ವ ಪುತ್ರನನ್ನು ಮನೆಯಂಗಳದಲ್ಲಿ ಸರಪಳಿ ಮತ್ತು ಹಗ್ಗದಿಂದ ಕಟ್ಟಿ ಸಾಕಬೇಕಾದ ಪರಿಸ್ಥಿತಿ ಎದುರಾಗಿದೆ.

ತನ್ನ ವಯಸಿನ ಸುತ್ತಮುತ್ತಲ ಮಕ್ಕಳು ನಲಿಯುತ್ತಾ, ಆಟವಾಡುತ್ತಾ ಇದ್ದರೆ ಪ್ರವೀಣ್ ಮಾತ್ರ ಬೆರಗುಗಣ್ಣಿನಿಂಣದ ಯಾವದೇ ಅರಿವಿಲ್ಲದೇ ನೋಡುತ್ತಿದ್ದಾನೆ. ಬುದ್ಧಿಮಾಂದ್ಯನಾಗಿರುವ ಪ್ರವೀಣ್ ಮುಕ್ತವಾಗಿ ಬಿಟ್ಟರೆ ಕಾಡಿಗೆ ಓಡಿ ಹೋಗಿ ಎಲೆ ಸೊಪ್ಪು ತಿನ್ನಲು ಪ್ರಾರಂಭಿಸುತ್ತಾನೆ. ಈ ವ್ಯಾಪ್ತಿಯಲ್ಲಿ ಕಾಡುಮೃಗಗಳೂ ಇದ್ದು, ಇದರಿಂದಾಗಿ ರಕ್ಷಿಸಲು ನಿಸ್ಸಹಾಯಕ ಪೋಷಕರು ಈತನ ಕಾಲಿಗೆ ಹಗ್ಗ ಮತ್ತು ಸರಪಳಿ ಕಟ್ಟಿ ಮನೆಯ ಕಿಟಕಿಗೆ ಕಟ್ಟಿದ್ದಾರೆ. ಅಪಾರ ಮಮತೆ ಪ್ರೀತಿಯಿಂದ ಈತನನ್ನು ನೋಡಿಕೊಳ್ಳುತ್ತಿದ್ದರೂ ಅನಿವಾರ್ಯ ವಾಗಿ ಈತನ ಕಾಲಿಗೆ ಸಂಕೋಲೆ ಕಟ್ಟಬೇಕಾದ ಪರಿಸ್ಥಿತಿಯಿಂದ ಪೋಷಕರು ಕಂಬನಿ ಮಿಡಿಯುತ್ತಿದ್ದಾರೆ. ತಂದೆ ಕೂಡ ಇತ್ತೀಚೆಗೆ ಬಿದ್ದು ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಯಾವದೇ ಕೆಲಸ ಮಾಡದಂತಹ ಪರಿಸ್ಥಿತಿ. ಕೂಲಿ ಮಾಡುತ್ತಿರುವ ತಾಯಿಗೆ ಇಬ್ಬರನ್ನು ಪೋಷಿಸಬೇಕಾದ ಸಂದಿಗ್ಧತೆ ತಲೆದೋರಿದೆ. - ಸುಧಿ