ಸೋಮವಾರಪೇಟೆ, ಡಿ. 4: ಪ್ರಾಕೃತಿಕ ವಿಕೋಪದ ನಂತರ ಕೈಗೊಳ್ಳಲಾದ ತಡೆಗೋಡೆ ಕಾಮಗಾರಿಗಳ ಗುಣಮಟ್ಟವನ್ನು ಪರೀಕ್ಷಿಸಿದ ನಂತರವಷ್ಟೇ ಬಿಲ್ ಪಾವತಿಗೆ ಅವಕಾಶ ಕಲ್ಪಿಸಲಾಗುವದು. ಕೆಲವೆಡೆ ಕಳಪೆ ಕಾಮಗಾರಿ ನಡೆಸಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಗುಣಮಟ್ಟ ಪರೀಕ್ಷೆ ನಡೆಸಲು ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡಲಾಗುವದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ತಿಳಿಸಿದ್ದಾರೆ.

ಭಾರೀ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ಕೊಚ್ಚಿಕೊಂಡು ಹೋಗಿರುವ ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ರಸ್ತೆಗಳಿಗೆ ಎಂ. ಸ್ಯಾಂಡ್‍ನಿಂದ ತಡೆಗೋಡೆ ನಿರ್ಮಿಸಲಾಗಿದ್ದು, ತಾಲೂಕಿನ ತಲ್ತರೆಶೆಟ್ಟಳ್ಳಿಯಲ್ಲಿ ಎಂ.ಸ್ಯಾಂಡ್‍ನೊಂದಿಗೆ ಮಣ್ಣು, ಮರಳು ಮಿಶ್ರಮಾಡಿ ಕಾಮಗಾರಿ ನಡೆಸಲಾಗಿದೆ ಎಂಬ ದೂರಿನ ಹಿನ್ನೆಲೆ ಸ್ಥಳ ಪರಿಶೀಲನೆ ನಡೆಸಿದ ಶಾಸಕರು, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಹಾನಗಲ್ಲು-ಚಂದನಮಕ್ಕಿ-ತಲ್ತರೆಶೆಟ್ಟಳ್ಳಿ-ತಾಕೇರಿ ರಸ್ತೆಯಲ್ಲಿ ಕೈಗೊಳ್ಳಲಾದ ಎಂ.ಸ್ಯಾಂಡ್ ತಡೆಗೋಡೆ ಕಾಮಗಾರಿಯಲ್ಲಿ ಎಂ.ಸ್ಯಾಂಡ್‍ನೊಂದಿಗೆ ಮಣ್ಣು ಮತ್ತು ಮರಳನ್ನು ಮಿಶ್ರಮಾಡಿ ಚೀಲದಲ್ಲಿ ತುಂಬಿಹಾಕಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ತಾನು ಸ್ಥಳ ಪರಿಶೀಲನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಬಿಲ್ ಪಾವತಿಗೂ ಮುನ್ನ, ಗುಣಮಟ್ಟ ಪರೀಕ್ಷಾ ಕೇಂದ್ರದ ಅಧಿಕಾರಿಗಳಿಂದ ಕಾಮಗಾರಿಯನ್ನು ಪರಿಶೀಲನೆ ನಡೆಸಲಾಗುವದು ಎಂದು ರಂಜನ್ ತಿಳಿಸಿದರು.

ಈಗಾಗಲೇ ಕೈಗೊಳ್ಳಲಾಗಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅರ್ಧ ಹಣವನ್ನು ಗುತ್ತಿಗೆದಾರರಿಗೆ ಕೊಡಿಸುವ ಕಾರ್ಯ ಆಗುತ್ತಿದೆ. ಕೆಲವೆಡೆ ಗುಣಮಟ್ಟದ ಕಾಮಗಾರಿ ನಡೆದಿದ್ದು, ಒಂದೆರಡು ಕಾಮಗಾರಿ ಕಳಪೆಯಾಗಿರುವ ಸಂಶಯವಿದೆ. ಗುಣಮಟ್ಟದಲ್ಲಿ ಲೋಪ ಕಂಡುಬಂದಲ್ಲಿ ಬಿಲ್ ತಡೆಹಿಡಿಯಲಾಗುವದು. ಗುತ್ತಿಗೆದಾರರು ನಿರ್ವಹಿಸಿರುವ ಕಾಮಗಾರಿಗಳ ಸಂಪೂರ್ಣ ಮಾಹಿತಿ ಪಡೆದು, ಮುಂದಿನ ಕ್ರಮ ಕೈಗೊಳ್ಳಲಾಗುವದು. ಕಳಪೆ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವದು ಎಂದರು. ಕೆಲವು ಭಾಗಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ ಎಂದ ರಂಜನ್, ಲೋಕೋಪಯೋಗಿ ಇಲಾಖಾ ಸಚಿವರೊಂದಿಗೆ ಮಾತುಕತೆ ನಡೆಸಿ, ಹೆಚ್ಚಿನ ಅನುದಾನಕ್ಕೆ ಒತ್ತಡ ಹಾಕುವದಾಗಿ ತಿಳಿಸಿದರು.

ಕೊಡಗು ಪ್ಯಾಕೇಜ್‍ನಲ್ಲಿ ಹಲವಷ್ಟು ಕಾಮಗಾರಿಗಳು ನಡೆಯದಿರುವ ಬಗ್ಗೆ ದೂರುಗಳು ಬಂದಿದ್ದು, ಅಧಿವೇಶನ ಮುಗಿದ ತಕ್ಷಣ ಪ್ಯಾಕೇಜ್ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಲಾಗುವದು. ಪ್ಯಾಕೇಜ್ ಕಾಮಗಾರಿಗಳು ನಡೆಯದಿರುವ ಬಗ್ಗೆ ಸಾರ್ವಜನಿಕರೂ ಸಹ ದೂರು ನೀಡಬಹುದು. ಅಂತಹ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಎಂದರು.

ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಕುಸಿತಗೊಂಡ ಹಾನಗಲ್ಲು-ದುದ್ದುಗಲ್ಲು ರಸ್ತೆಯಲ್ಲಿ ಕೈಗೊಳ್ಳಲಾಗಿರುವ ತಡೆಗೋಡೆ ಕಾಮಗಾರಿ, ಕಲ್ವರ್ಟ್, ತಲ್ತರೆಶೆಟ್ಟಳ್ಳಿ ರಸ್ತೆಯ ತಡೆಗೋಡೆ ಕಾಮಗಾರಿಗಳನ್ನು ಶಾಸಕರು ಪರಿಶೀಲನೆ ನಡೆಸಿದರು.

ದುದ್ದುಗಲ್ಲು ಶ್ರೀ ಮಲ್ಲಿಕಾರ್ಜುನ ದೇವಾಲಯದ ಬಳಿಯಲ್ಲಿರುವ ತಿರುವು ರಸ್ತೆಯಲ್ಲಿ ಪ್ರಗತಿಯಲ್ಲಿರುವ ಚರಂಡಿ ಕಾಮಗಾರಿಯನ್ನು ವೀಕ್ಷಿಸಿದ ಶಾಸಕರು, ಕಾಮಗಾರಿ ಸಮರ್ಪಕವಾಗದ ಹಿನ್ನೆಲೆ ಅತೃಪ್ತಿ ವ್ಯಕ್ತಪಡಿಸಿದರು. ಮಳೆಯ ನೀರು ಸರಾಗವಾಗಿ ಹರಿಯುವಂತೆ ಚರಂಡಿ ನಿರ್ಮಿಸಿ ಎಂದು ಸಂಬಂಧಿಸಿದ ಅಭಿಯಂತರ ವಿಜಯಕುಮಾರ್ ಮತ್ತು ಗುತ್ತಿಗೆದಾರ ಸಂತೋಷ್ ಅವರಿಗೆ ಸೂಚಿಸಿದರು.