ಮಡಿಕೇರಿ, ಡಿ. 4: ಕುತೂಹಲಕಾರಿ ಬೆಳವಣಿಗೆ ಯೊಂದರಲ್ಲಿ ಕವಿತ ಪ್ರಭಾಕರ್ ಅವರ ಜಿಲ್ಲಾ ಪಂಚಾಯ್ತಿ ಸದಸ್ಯತ್ವವು ಕಾನೂನು ಹೋರಾಟದ ಮೂಲಕ ರದ್ದಾಗಿದ್ದು ನ್ಯಾಯಾಧೀಶರ ತೀರ್ಪಿನ ಮೂಲಕ ದೇವಂಗೋಡಿ ತಿಲಕ ನೂತನ ಸದಸ್ಯೆಯಾಗಿ ಘೋಷಿ ಸಲ್ಪಟ್ಟಿದ್ದಾರೆ. ಭಾಗಮಂಡಲ ಜಿ.ಪಂಚಾಯ್ತಿ ಕ್ಷೇತ್ರದಿಂದ ತಾ.20-2-2016 ರಂದು ಕರಿಕೆ ಮೂಲದ ಕವಿತ ಪ್ರಭಾಕರ್ ಅವರು ಬಿ.ಜೆ.ಪಿಯಿಂದ ಆಯ್ಕೆಗೊಂಡಿದ್ದರು.ತಣ್ಣಿಮಾನಿ ಮೂಲದ ಕಾಂಗ್ರೆಸ್ ಅಭ್ಯರ್ಥಿ ದೇವಂಗೋಡಿ ತಿಲಕ ಅವರು ಪರಾಭವಗೊಂಡಿದ್ದರು. ಚುನಾವಣೆ ಸಂದರ್ಭ ಕವಿತ ವಿರುದ್ಧ ತಿಲಕ ಅವರು ಚುನಾವಣಾಧಿಕಾರಿಗೆ ದೂರು ನೀಡಿ ಕವಿತ ಅವರ ಪತಿ ಪ್ರಭಾಕರ್ ಅವರು ಜಿ.ಪಂಚಾಯ್ತಿ ಕಾಮಗಾರಿ ಗುತ್ತಿಗೆದಾರರಾದುದರಿಂದ ಕವಿತ ಅವರ ನಾಮಪತ್ರವನ್ನು ತಿರಸ್ಕರಿಸುವಂತೆ ಮನವಿ ಮಾಡಿದ್ದರು. ಆದರೆ ಆಗ ಚುನಾವಣಾಧಿಕಾರಿ ಈ ಮನವಿಯನ್ನು ತಿರಸ್ಕರಿಸಿ ಕವಿತ ಅವರ ನಾಮಪತ್ರವನ್ನು ಸಿಂಧುಗೊಳಿಸಿ ಸ್ವೀಕರಿಸಿದ್ದು ಚುನಾವಣೆಯಲ್ಲಿ ಅವರು ಜಿ.ಪಂ. ಸದಸ್ಯೆಯಾಗಿ ಆಯ್ಕೆ ಗೊಂಡಿದ್ದರು.

ಪರಾಭವಗೊಂಡಿದ್ದ ತಿಲಕ ಅವರು ಮಡಿಕೇರಿಯ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಇವರ ಪರ ವಾದ ಮಾಡಿದ ವಕೀಲರಾದ ಎಂ. ಎ.ನಿರಂಜನ್ ಅವರು ತಮ್ಮ ವಾದದಲ್ಲಿ ಸೆ.167, ಕ್ಲಾಸ್ ಹೆಚ್ ಅನ್ವಯ ಆಯ್ಕೆಗೊಂಡ ಕುಟುಂಬದ ಯಾವದೇ ಸದಸ್ಯರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆಯ್ಕೆಗೊಂಡ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಹಿತಾಸಕ್ತಿಯ ಸಂಪರ್ಕ ಹೊಂದಿದ್ದರೆ ಅಂತಹ ಸದಸ್ಯರು ಆ ಸ್ಥಾನದಲ್ಲಿ ಮುಂದುವರಿ ಯಲು ಕಾನೂನು ಪ್ರಕಾರ ಅನರ್ಹ ರಾಗುತ್ತಾರೆ. ಇಂತಹ ಒಂದು ನಿದರ್ಶನ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಹೊರ ಹೊಮ್ಮಿದೆ. ಓರ್ವ ವ್ಯಕ್ತಿ ಪುರಸಭೆಗೆ ಆಯ್ಕೆಗೊಂಡಿದ್ದರು. ಆದರೆ, ಅವರ ಪತ್ನಿ ಪುರಸಭಾ ಶಾಲೆಯ ಶಿಕ್ಷಕಿಯಾಗಿದ್ದರು. ಆಯ್ಕೆ ಬಳಿಕ ಸೋತ ಅಭ್ಯರ್ಥಿ ನ್ಯಾಯಾಲ ಯದಲ್ಲಿ ತಕರಾರು ಅರ್ಜಿ ಸಲ್ಲ್ಲಿಸಿದಾಗ ಗೆದ್ದ ವ್ಯಕ್ತಿಯ ಪತ್ನಿ ಪುರಸಭಾ ಶಾಲೆಯಲ್ಲಿ ಶಿಕ್ಷಕಿಯಾದುದರಿಂದ ಅವರ ಪತಿ ಗೆದ್ದ ಅಭ್ಯರ್ಥಿ ಸ್ವಹಿತಾಸಕ್ತ ಕಾನೂನಿನ ಅನ್ವಯ ನ್ಯಾಯಾಲಯದ ತೀರ್ಪಿನ ಪ್ರಕಾರ ಸದಸ್ಯತ್ವ ಕಳೆದು ಕೊಳ್ಳಬೇಕಾಯಿತು ಎಂದು ವಕೀಲ ನಿರಂಜನ್ ವಾದಿಸಿದರು.

ಈ ಪ್ರಕರಣದಲ್ಲಿ ಕವಿತಾ ಅವರ ಪತಿ ಪ್ರಭಾಕರ್ ಅವರು ಜಿಲ್ಲಾ ಪಂಚಾಯ್ತಿಯ ಕಾಮಗಾರಿ ಗುತ್ತ್ತಿಗೆ ಕೆಲಸವನ್ನು 2009 ರಿಂದ 2015 ರವರೆಗೆ ನಿರ್ವಹಿಸಿದ್ದಕ್ಕೆ ಸೂಕ್ತ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ನೀಡಲಾಯಿತು. ಅಲ್ಲದೆ ಕವಿತ ಅವರು ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಆಯ್ಕೆಗೊಂಡ ಬಳಿಕವೂ ಅವರ ಪತಿ ಪ್ರಭಾಕರ್ ಅವರಿಗೆ ಜಿಲ್ಲಾ ಪಂಚಾಯ್ತಿಯಿಂದ ಗುತ್ತಿಗೆ ಕೆಲಸದ ಬಾಬ್ತು ಬಿಲ್ಲಿನ ಹಣ ಪಾವತಿಸಿದ ದಾಖಲಾತಿಗಳನ್ನು ಕೂಡ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಈ ಎಲ್ಲ ಸಮರ್ಥನೀಯ ಅಂಶ ಗಳನ್ನು ಪರಿಗಣಿಸಿದ ನ್ಯಾಯಾಧೀಶ ವಿಜಯಕುಮಾರ್ ಅವರು ಮಂಗಳವಾರ ತೀರ್ಪು ನೀಡಿ ಪ್ರಭಾಕರ್ ಅವರ ಪತ್ನಿ ಕವಿತ ಪ್ರಭಾಕರ್ ಅವರ ಜಿ.ಪಂ ಸದಸ್ಯ ಸ್ಥಾನವನ್ನು ರದ್ದುಗೊಳಿಸಿ ಆದೇಶ ನೀಡಿದ್ದಾರೆ. ಮಾತ್ರವಲ್ಲ, ಈ

ಹಿಂದೆ ಅವರ ವಿರುದ್ಧ ಪರಾಭವಗೊಂಡಿದ್ದ ಸುಬ್ರಾಯ ಅವರ ಪತ್ನಿ ದೇವಂಗೋಡಿ ತಿಲಕ ಸುಬ್ರಾಯ ಅವರನ್ನು ನೂತನ ಸದಸ್ಯೆಯಾಗಿ ಪರಿಗಣಿಸಿ ತೀರ್ಪು ನೀಡಿರುವದು ಒಂದು ಅಪರೂಪದ ಸನ್ನಿವೇಶವೆನಿಸಿದೆ.