ಕೂಡಿಗೆ, ಡಿ. 4: ಕೂಡಿಗೆಯಲ್ಲಿರುವ ಕಾವೇರಿ ಹಾರಂಗಿ ನದಿ ಸಂಗಮದ ಸ್ಥಳದಲ್ಲಿ ನೂರಾರು ಮಂಗಗಳಿದ್ದು, ಇವುಗಳಿಂದ ಸ್ಥಳೀಯ ರೈತರುಗಳಿಗೆ ತೊಂದರೆಯಾಗುತ್ತಿದೆ.

ಸಂಗಮದ ಸಮೀಪವಿರುವ ಜಮೀನಿನಲ್ಲಿ ಭತ್ತದ ಬೆಳೆಯನ್ನು ಬೆಳೆಯಲಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಭತ್ತದ ಬೆಳೆಗಳನ್ನು ಕೊಯ್ದು ಗದ್ದೆಯಲ್ಲಿ ಬಿಡಲಾಗಿದೆ. ಆದರೆ ಸಂಗಮದ ಸಮೀಪದಲ್ಲಿರುವ ನೂರಾರು ಮಂಗಗಳು ಹಾಡಹಗಲೇ ಭತ್ತದ ಬೆಳೆಯನ್ನು ತಿನ್ನಲು ಕೊಂಡೊಯ್ಯುತ್ತಿವೆ.

ಅಲ್ಲದೇ ಕೂಡಿಗೆ ಸಂಗಮದಿಂದ ಕಣಿವೆಯವರೆಗೆ ಹೊಳೆಯ ಸಮೀಪದಲ್ಲಿ ಬೆಳೆಸಲಾದ ತೆಂಗಿನ ಮರಗಳಲ್ಲಿ ಮಂಗಗಳು ಹತ್ತಿ ಎಳನೀರನ್ನು ಕುಡಿಯುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆಯವರು ಮಂಗಗಳನ್ನು ಓಡಿಸಿದ್ದಲ್ಲಿ ರೈತರ ಬೆಳೆಗಳು ಸುರಕ್ಷಿತವಾಗಲಿದೆ.