ಮಡಿಕೇರಿ, ಡಿ. 4: ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಸಂಘ ಬೆಂಗಳೂರು, ಘಟಕ ಕೊಡಗು ಜಿಲ್ಲೆಯ ಪೂರ್ವಭಾವಿ ಸಭೆ ನಡೆಯಿತು.

ಶಿಕ್ಷಣ ಇಲಾಖೆಯು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ನಿರ್ಧರಿಸಿರುವದು ಸ್ವಾಗತಾರ್ಹ. ಆದರೆ ಹಲವು ವರ್ಷಗಳಿಂದ ಸೇವೆ ಮಾಡುತ್ತಿರುವ ಅತಿಥಿ ಶಿಕ್ಷಕರನ್ನು ಕೈಬಿಡಲು ನಿರ್ಧರಿಸುತ್ತಿರುವ ಕ್ರಮ ವಿರೋಧಿಸಿ ಮತ್ತು ಕನಿಷ್ಟ ವೇತನ, ಸೇವಾ ಭದ್ರತೆ, ಸೇವಾ ದೃಢೀಕರಣ ನೇಮಕಾತಿಯಲ್ಲಿ ಕೃಪಾಂಕ ನೀಡದೆ ಇರುವದು ಹಾಗೂ ಅತಿಥಿ ಶಿಕ್ಷಕರನ್ನು ಖಾಯಂ ಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿ ಚಳಿಗಾಲದ ಅಧಿವೇಶನದ ಸಂದರ್ಭ ಅತಿಥಿ ಶಿಕ್ಷಕರ ಸಮಸ್ಯೆಗಳನ್ನು ಸರಕಾರಕ್ಕೆ ಮನವರಿಕೆ ಮಾಡಲು ಧರಣಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ವಿಕ್ರಾಂತ, ರಾಜ್ಯ ಜಿಲ್ಲಾ ಜಂಟಿ ಕಾರ್ಯದರ್ಶಿ ನಾಗರಾಜು, ಜಿಲ್ಲಾ ಮತ್ತು ತಾಲೂಕುಗಳ ಎಲ್ಲಾ ಪದಾಧಿಕಾರಿಗಳು, ಅತಿಥಿ ಶಿಕ್ಷಕರು ಹಾಜರಿದ್ದರು.