ಮಡಿಕೇರಿ, ಡಿ. 4: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತಾ. 6ರಂದು ನಾಳೆ ಕೆಲವು ಸಂಘಟನೆಗಳು ವಿಜಯೋತ್ಸವ ಹಾಗೂ ಇನ್ನೂ ಕೆಲವು ಸಂಘಟನೆಗಳು ಕರಾಳ ದಿನಾಚರಣೆ ಮಾಡುವ ಸಾಧ್ಯತೆ ಇರುವದರಿಂದ ಗುಂಪು ಘರ್ಷಣೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ತಾ. 6ರಂದು (ನಾಳೆ) ಬೆಳಿಗ್ಗೆ 6 ಗಂಟೆಯಿಂದ ಮಧ್ಯ ರಾತ್ರಿ 12 ಗಂಟೆಯವರೆಗೆ ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ. ಪೂರ್ವ ನಿಯೋಜಿತ ಮದುವೆ, ನಾಮಕರಣ, ಗೃಹಪ್ರವೇಶ ಹಾಗೂ ಸರ್ಕಾರಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ಬೇರೆ ಯಾವದೇ ಸಭೆ ಸಮಾರಂಭ, ಮೆರವಣಿಗೆ ನಡೆಸುವಂತಿಲ್ಲ, ವಿಜಯೋತ್ಸವ, ಕರಾಳ ದಿನಾಚರಣೆಯನ್ನು ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.