ಶ್ರೀಮಂಗಲ, ಡಿ. 4: ಒಂದು ದಶಕಕ್ಕೂ ಹೆಚ್ಚು ಕಾಲ ಮುಚ್ಚಿಹೋಗಿದ್ದ ಬಲ್ಯಮುಂಡೂರು ಗ್ರಾ.ಪಂ. ವ್ಯಾಪ್ತಿಯ ತೂಚಮಕೇರಿಯ ಪೊಲೆಮಲೆಕೇರಿ ಮಂದ್ ಅನ್ನು ತಾ. 8 ರಂದು ಸಾಂಪ್ರದಾಯಿಕ ಪುತ್ತರಿ ಕೋಲಾಟ್ ಆರಂಭಿಸುವ ಮೂಲಕ ಮಂದ್‍ಗೆ ಜೀವಂತಿಕೆ ನೀಡಲು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಪುತ್ತರಿ ಕೋಲಾಟ್ ಸಮಿತಿಯ ತಕ್ಕಮುಖ್ಯಸ್ಥರು ಸೇರಿ ನಡೆಸಿದ ಮೂರ್ವಭಾವಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಪೊಲೆಮಲೆಕೇರಿ ಅಂಬಲ ದಲ್ಲಿರುವ ಮಂದ್ ಜಾಗದಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಈ ಸಂದರ್ಭ ಮಾತನಾಡಿದ ಅವರು ಪ್ರಸಕ್ತ ವರ್ಷ ಹೈಸೊಡ್ಲೂರು ಗ್ರಾಮದಲ್ಲಿ ಮೂವತ್ತು ವರ್ಷದಿಂದ ಮುಚ್ಚಿ ಹೋಗಿದ್ದ ಪಯ್ಯಡ ಮಂದ್ ಅನ್ನು ಅಕಾಡೆಮಿ ಹಾಗೂ ಅಲ್ಲಿನ ಗ್ರಾಮಸ್ಥರು ಸೇರಿ ಪುನರಾರಂಭ ಮಾಡಲಾಗಿದೆ. ಇದೀಗ ತೂಚಮಕೇರಿಯಲ್ಲಿ ಮುಚ್ಚಿ ಹೋಗಿರುವ ಪೊಲೆಮಲೆಕೇರಿ ಮಂದ್ ಅನ್ನು ಆರಂಭಿಸಲು ಗ್ರಾಮಸ್ಥರು ಉತ್ಸುಕತೆ ತೋರುವದನ್ನು ನೋಡಿದರೆ ಮಂದ್‍ಗಳ ಮಹತ್ವ ನಮ್ಮ ಜನರಿಗೆ ಅರ್ಥವಾಗುತ್ತಿದೆ ಎಂಬದು ಸಂತೋಷಕರವಾಗಿದೆ. ಮಂದ್ ಕೊಡವರ ಹಾಗೂ ಕೊಡವ ಭಾಷಿಕರ ಸಾಂಸ್ಕøತಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಂದ್‍ನಲ್ಲಿಯೆ ಹಿಂದಿನ ಕಾಲದಲ್ಲಿ ಹಾಗೂ ಇಂದಿಗೂ ಹಲವೆಡೆ ಪ್ರಮಾಣ ಹಾಗೂ ವಿವಾದಗಳನ್ನು ಇತ್ಯಾರ್ಥ ಪಡೆಸುವ ಪವಿತ್ರ ಜಾಗವಾಗಿತ್ತು ಎಂಬ ಬಗ್ಗೆ ಮೆಲುಕು ಹಾಕಿದರು. ತಾ. 8 ರಂದು ಮಂದ್ ತೆರೆಯುವ ಕಾರ್ಯಕ್ರಮ ಪೂರ್ವಾಹ್ನ 10 ರಿಂದ ಆರಂಭವಾಗಲಿದೆ. ಈ ಸಂದರ್ಭ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ತೂಚಮಕೇರಿಯ ಪುತ್ತರಿ ತಕ್ಕ ಪೆಮ್ಮಂಡ ಸಿ. ನಾಣಯ್ಯ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ವಾಲಗತ್ತಾಟ್, ಸಮ್ಮಂಧ ಅಡುಕುವೊ, ತಾಳಿಪಾಟ್, ಕೊಡವ ಪಾಟ್ ಪೈಪೋಟಿಗಳನ್ನು ಏರ್ಪಡಿಸಲಾಗಿದೆ. ಅಪರಾಹ್ನ 2 ಗಂಟೆಗೆ ಪುತ್ತರಿ ಕೋಲಾಟ್ ಮೂಲಕ ಮಂದ್‍ಗೆ ಚಾಲನೆ ನೀಡಲು ನಿರ್ಧರಿಸ ಲಾಯಿತು. ನಂತರ ನಡೆಯುವ ಸಭಾ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ, ಮುಖ್ಯ ಅತಿಥಿಯಾಗಿ ತೂಚಮಕೇರಿ ಪುತ್ತರಿ ಕೋಲಾಟ್ ಸಮಿತಿಯ ಅಧ್ಯಕ್ಷ ಮೂಕಳಮಾಡ ಅರಸು ನಂಜಪ್ಪ, ಸರ್ವೆ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಅಜ್ಜಿಕುಟ್ಟಿರ ಬಿ. ಭೀಮಯ್ಯ, ಕೊಡವ ಜಾನಪದ ತಜ್ಞ ಕಾಳಿಮಾಡ ಯಂ. ಮೋಟಯ್ಯ ಕೋಣನಕಟ್ಟೆ ಧನುಗಾಲದ ಸಮಾಜ ಸೇವಕ ಚೆಪ್ಪುಡಿರ ಕಿಟ್ಟು ಅಯ್ಯಪ್ಪ, ಪ್ರೌಢಶಾಲಾ ನಿವೃತ ಶಿಕ್ಷಕ ಪೆಮ್ಮಂಡ ಬಿ. ಅಯ್ಯಪ್ಪ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ರೂಪುರೇಶೆಯನ್ನು ಸಿದ್ಧಪಡಿಸಲಾಯಿತು. ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

ಈ ಸಂದರ್ಭ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರುಗಳಾದ ಚಂಗುಲಂಡ ಸೂರಜ್, ಆಂಗೀರ ಕುಸುಮ್, ನಾಳಿಯಮ್ಮಂಡ ಉಮೇಶ್ ಕೇಚಮ್ಮಯ್ಯ, ತೂಚಮಕೇರಿಯ ಪುತ್ತರಿ ಕೋಲಾಟ್ ಸಮಿತಿಯ ಅಧ್ಯಕ್ಷ ಮೂಕಳಮಾಡ ಅರಸು ನಂಜಪ್ಪ, ಸದಸ್ಯರುಗಳಾದ ಮೂಕಳಮಾಡ ಮಹೇಶ್, ಪೆಮ್ಮಂಡ ಅರುಣ, ಕುಲ್ಲಚ್ಚೀರ ಲವ, ಕರ್ತಮಾಡ ಬೇಬಿ, ಕುಲ್ಲಚ್ಚೀರ ಪ್ರಸು, ಚಿಂಡಮಾಡ ಕುಶಿ, ಕರ್ತಮಾಡ ಹರೀಶ್, ನೆಲ್ಸ ಹಾಜರಿದ್ದರು.