ಮಡಿಕೇರಿ, ಡಿ. 4: ಮೂರ್ನಾಡುವಿನ ಮಾರುತಿ ವಿದ್ಯಾಸಂಸ್ಥೆಯಲ್ಲಿ ಪೋಷಕರ ದಿನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾರುತಿ ಸಂಯುಕ್ತ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು. ವಿದ್ಯಾಸಂಸ್ಥೆಯ ಅಧ್ಯಕ್ಷ ಮುಂಡಂಡ ಕೆ. ಅಪ್ಪಚ್ಚು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ 2017-18ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ. ಕಲಾ ವಿಭಾಗದಲ್ಲಿ ಜಿಲ್ಲೆಗೆ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ ಬಿ.ಎ. ಶೃತಿ ಹಾಗೂ ನ್ಯಾಯಾಂಗ ಸೇವೆಗಳ ಪ್ರಾಥಮಿಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 17ನೇ ರ್ಯಾಂಕ್ ಪಡೆದು ನ್ಯಾಯಾಧೀಶೆಯಾಗಿ ಆಯ್ಕೆಯಾದ ಕಾಲೇಜಿನ ಎ.ಎಸ್. ಸಲ್ಮಾ ಅವರ ಸಾಧನೆಯನ್ನು ಅಭಿನಂದಿಸಿ, ಇಬ್ಬರು ಸಾಧಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಮೋಹನ್ ಅಪ್ಪಾಜಿ ಮಾತನಾಡಿ, ವಿದ್ಯಾರ್ಥಿಗಳು ಸುಂದರ ಭವಿಷ್ಯವನ್ನು ರೂಢಿಸಿಕೊಳ್ಳಲು ಶಿಸ್ತು, ಶ್ರದ್ಧೆ, ಪ್ರಾಮಾಣಿಕ ಪ್ರಯತ್ನದಿಂದ ಕಾರ್ಯಪ್ರವೃತ್ತರಾಗಬೇಕೆಂದು ಕಿವಿಮಾತು ಹೇಳಿದರು.

ಆಡಳಿತ ಮಂಡಳಿ ಉಪಾಧ್ಯಕ್ಷ ಬಡುವಂಡ ಅರುಣ್ ಅಪ್ಪಚ್ಚು, ಗೌರವ ಕಾರ್ಯದರ್ಶಿ ಚೇಂದ್ರಿಮಾಡ ದೇವಯ್ಯ, ಸದಸ್ಯರು, ಪ್ರಾಂಶುಪಾಲೆ ವಾಟೇರಿರ ಸಪ್ನ ಸುಬ್ಬಯ್ಯ ಉಪಸ್ಥಿತರಿದ್ದರು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.